ADVERTISEMENT

ಬಂಟ್ವಾಳ: ಜಿಲ್ಲಾಧಿಕಾರಿ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 10:00 IST
Last Updated 9 ಜೂನ್ 2011, 10:00 IST
ಬಂಟ್ವಾಳ: ಜಿಲ್ಲಾಧಿಕಾರಿ ದಿಢೀರ್ ಭೇಟಿ
ಬಂಟ್ವಾಳ: ಜಿಲ್ಲಾಧಿಕಾರಿ ದಿಢೀರ್ ಭೇಟಿ   

ಬಂಟ್ವಾಳ: ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿ ಮತ್ತು ಕಲ್ಲಡ್ಕ-ಕಾಞಂಗಾಡ್ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಮಳೆಹಾನಿ ಯೋಜನೆಯಡಿ ನಡೆದಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಬುಧವಾರ ವೀಕ್ಷಿಸಿದರು.

ಕಳೆದ 2009-10 ಮತ್ತು 2010-2011ನೇ ಸಾಲಿನಲ್ಲಿ ಕಾಮಗಾರಿ ನಡೆದಿದ್ದರೂ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಪಾವತಿಯಾಗದಿರುವ ವಿಚಾರ ತಿಳಿದು ಅವರು ಅಚ್ಚರಿ ವ್ಯಕ್ತಪಡಿಸಿದರು.
ಬಂಟ್ವಾಳ-ಮೂಡುಬಿದಿರೆ ರಸ್ತೆಯ ಕುದ್ಕೋಳಿ ಎಂಬಲ್ಲಿ ರೂ.8ಲಕ್ಷ ವೆಚ್ಛದ ಡಾಂಬರೀಕರಣ, ಎಸ್‌ವಿಎಸ್ ಕಾಲೇಜು ಸಮೀಪದ ತಿರುವು ರಸ್ತೆಯಲ್ಲಿ ಪುನರ್ ನಿರ್ಮಾಣಗೊಂಡಿದ್ದ ರೂ.5ಲಕ್ಷ ಮೊತ್ತದ ಕಾಮಗಾರಿಯ ಪಾವತಿ ಬಿಡುಗಡೆಗೆ ಬಾಕಿಯಿತ್ತು.

ಇನ್ನೊಂದೆಡೆ ಕಳೆದ ಒಂದೂವರೆ ವರ್ಷದ ಮೊದಲು ಕಲ್ಲಡ್ಕ-ಕಾಞಂಗಾಡ್ ರಸ್ತೆಯ ನಡುವಿನ ಮಂಗಿಲಪದವು ಎಂಬಲ್ಲಿ ರೂ. 50ಲಕ್ಷ ವೆಚ್ಚದ ಮೇಲ್ಮೈ ಬಲಪಡಿಸಿ ಡಾಂಬರೀಕರಣ ಕಾಮಗಾರಿ ನಡೆದಿದ್ದು, ಈ ಪೈಕಿ ಗುತ್ತಿಗೆದಾರರಿಗೆ ಕೇವಲ ರೂ.25ಲಕ್ಷ ಮಾತ್ರ ಪಾವತಿಯಾಗಿತ್ತು.

ಈ ಹಿಂದಿನ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಮತ್ತು ಸುಬೋಧ್ ಯಾದವ್ ಅವರು ಕಾಮಗಾರಿ ವೀಕ್ಷಿಸಿದ್ದರೂ, ಅನುದಾನ ಬಿಡುಗಡೆಗೊಳಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದಾಗಿ ಗುತ್ತಿಗೆದಾರರಾದ ಪ್ರೇಮ್‌ನಾಥ್ ಮತ್ತು ಎ.ಎಚ್.ಅಬ್ದುಲ್ ಖಾದರ್ ಕಂಗಾಲಾಗಿದ್ದರು. ಇದೇ ರೀತಿ ಜಿಲ್ಲೆಯಾದ್ಯಂತ ಬಹುತೇಕ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳದೆ ಪ್ರತಿಭಟನೆಯನ್ನೂ ನಡೆಸಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮತ್ತು ಒಳಚರಂಡಿ ಕಾಮಗಾರಿ ಅವ್ಯವಸ್ಥೆಯನ್ನು ಖುದ್ದಾಗಿ ಗಮನಿಸಿದ್ದ ನೂತನ ಡಿ.ಸಿ. ಚನ್ನಪ್ಪ ಗೌಡ ಅವರಿಗೆ ಈ ವಿಚಾರ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.
ಇದರಿಂದಾಗಿ ಎರಡೇ ದಿನದಲ್ಲಿ ಮತ್ತೆ ಭೇಟಿ ನೀಡಿದ ಅವರು, ಈ ಬಗ್ಗೆ ಗಮನ ಹರಿಸಿದ್ದಾರೆ. ಇನ್ನಾದರೂ ಬಾಕಿಯಿರುವ ಅನುದಾನ ಬಿಡುಗಡೆಯಾದೀತು ಎಂಬ ನಿರೀಕ್ಷೆ ಗುತ್ತಿಗೆದಾರರಲ್ಲಿ ಮೂಡಿದೆ.

ಈ ನಡುವೆ ವೀರಕಂಭದಲ್ಲಿ ಕಪ್ಪು ಕಲ್ಲಿನ ಕೋರೆಯೊಂದಕ್ಕೆ ಕೂಡಾ ಜಿಲ್ಲಾಧಿಕಾರಿ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಆ ಬಳಿಕ ಇಲ್ಲಿನ ಸರ್ಕಾರಿ ನಿರೀಕ್ಷಣಾ ಮಂದಿರದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಿದರು.

ಪ್ರಭಾರ ತಹಶೀಲ್ದಾರ್ ಎಂ.ಸಿ.ವಿಜಯ್, ಪಿಡಬ್ಲ್ಯೂಡಿ ಎಂಜಿನಿಯರ್‌ಗಳಾದ ಲೋಕೇಶ್ವರ್, ಅರುಣ್ ಪ್ರಕಾಶ್, ಚಿದಂಬರ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಆರ್.ವಿ.ಜತ್ತನ್ನ ಮತ್ತಿತರರು ಇದ್ದರು.
ಬಂಟ್ವಾಳ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಾಕಷ್ಟು ಕೆಂಪು ಕಲ್ಲು ಮತ್ತು ಜೆಲ್ಲಿ ಸಾಗಾಟದ ಲಾರಿ ಓಡಾಟ ನಡೆಸುತ್ತಿದ್ದು, ರಸ್ತೆ ಪದೇ ಪದೇ ಹದಗೆಡುತ್ತಿದೆ.

ಇದೀಗ ಇಲ್ಲಿನ ಎಸ್‌ವಿಎಸ್ ಕಾಲೇಜು    ಬಳಿ ರಸ್ತೆ ಬದಿ ಕುಸಿದು ಹೋಗಿದ್ದು, ಬುಧವಾರ ಇದೇ ರಸ್ತೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳು ಓಡಾಟ ನಡೆಸಿದರು. ಇನ್ನಾದರೂ ಈ ರಸ್ತೆ ದುರಸ್ತಿ ಹಾಗೂ ನಿರ್ವಹಣೆ ಬಗ್ಗೆ ಅಧಿಕಾರಿಗಳುಮತ್ತು ಜನಪ್ರತಿನಿಧಿಗಳು ಗಮನಹರಿಸಬಹುದೇ ಎಂಬ ಆಶಯ ನಾಗರಿಕರಲ್ಲಿ ಮೂಡಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT