ADVERTISEMENT

ಮುಂಗಾರು ಮಳೆ ಆರಂಭ: ಪರಿಹಾರ ಕಾಣದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 9:28 IST
Last Updated 5 ಜೂನ್ 2013, 9:28 IST

ಸುರತ್ಕಲ್: ಮುಂಗಾರು ಆರಂಭಗೊಂಡು ಕೃತಕ ನೆರೆಯ ಭೀತಿ ಎದುರಾಗಿದ್ದರೂ ಮಳೆಗಾಲವನ್ನು ಎದುರಿಸಲು ಮಹಾನಗರ ಪಾಲಿಕೆ ಇನ್ನೂ ಸಜ್ಜಾಗಿಲ್ಲ. ಸುರತ್ಕಲ್ ಪ್ರದೇಶ ಇನ್ನೂ ಸಮಸ್ಯೆಯ ಆಗರವಾಗಿಯೇ ಉಳಿದಿದೆ.

ನಗರ ಪ್ರದೇಶದಲ್ಲಿ ಚರಂಡಿ, ತೋಡುಗಳ ಹೂಳೆತ್ತುವ ಕಾಮಗಾರಿ ಕೆಲವಡೆ ನಡೆದರೆ ಇನ್ನೂ ಕೆಲವೆಡೆ ಹಿಂದಿನ ಸ್ಥಿತಿಯೇ ಇದೆ. ಇತ್ತ ಮಂಗಳೂರು ಉಡುಪಿ ಚತುಷ್ಪಥ ಹೆದ್ದಾರಿ ಸಂಚಾರ ದ್ವಿಚಕ್ರ ಸವಾರರಿಗೆ ಪಾದಚಾರಿಗಳಿಗೆ ಕಂಟಕ ತರುವ ಎಲ್ಲಾ ಸಾಧ್ಯತೆಯಿದೆ.

ಮಂಗಳೂರಿನಿಂದ ಸುರತ್ಕಲ್ ಎನ್‌ಐಟಿಕೆ ವರೆಗೆ ರಸ್ತೆಯೇನೋ ಪೂರ್ಣಗೊಳಿಸಲಾಗಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಹದೆಗೆಟ್ಟ ಸ್ಥಿತಿಯಲ್ಲೇ ಇದೆ ಎಂಬ ಅಳಲು ನಾಗರಿಕರದು.

ಪ್ರಮುಖವಾಗಿ ಬೈಕಂಪಾಡಿಯಿಂದ ಸುರತ್ಕಲ್ ವರೆಗೆ ಹೆಚ್ಚಿನ ಭಾಗದಲ್ಲಿ ಚರಂಡಿಯೇ ಇಲ್ಲ. ಪರಿಣಾಮ ಮಳೆ, ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಪಾದಚಾರಿಗಳು ನಡೆದಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.

ಗುಡ್ಡಗಳಿಂದ ಹರಿದು ಬಂದ ಕೆಸರು ಮಣ್ಣು ರಸ್ತೆ ಬದಿ ಶೇಖರಣೆಗೊಂಡು ಜಾರಿ ಬೀಳುವ ಸ್ಥಿತಿಯಿದೆ. ಹಲವೆಡೆ ಚರಂಡಿ ಇದ್ದರೂ ಹೂಳೆತ್ತದ ಕಾರಣ ನೀರು ಹರಿಯುತ್ತಿಲ್ಲ. ಹೀಗಾಗಿ ಮಳೆ ನೀರು ನಿಂತು ಫುಟ್‌ಪಾತ್ ಕಣ್ಮರೆಯಾಗಿದೆ. ಇದರಿಂದ ಜನರ ಓಡಾಟಕ್ಕೆ ತೊಡಕುಂಟಾಗಿದೆ.

ಕಳೆದ ಬಾರಿಯೂ ಇದೇ ಪರಿಸ್ಥಿತಿ ಉಂಟಾಗಿದ್ದು ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.