ADVERTISEMENT

ಸಮಾನತೆಯಿಂದ ಪ್ರಜಾಪ್ರಭುತ್ವಕ್ಕೆ ಯಶಸ್ಸು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 10:05 IST
Last Updated 11 ಮಾರ್ಚ್ 2011, 10:05 IST

ಬೆಳ್ತಂಗಡಿ: ‘ಧರ್ಮ, ಜಾತಿ- ಮತ, ಬಡವ-ಬಲ್ಲಿದನೆಂಬ ಭೇದಭಾವ ಇಲ್ಲದೇ ಸಮಾನತೆಯ ನೆಲೆಯಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗುತ್ತದೆ. ಸುಖಿ ಸಮಾಜ ನಿರ್ಮಾಣವಾಗುತ್ತದೆ. ಆರ್ಥಿಕ ಪ್ರಗತಿಯೊಂದಿಗೆ ಬೌದ್ಧಿಕ ಆಧ್ಯಾತ್ಮಿಕ ಹಾಗೂ ನೈತಿಕ ಮಟ್ಟವೂ ಸುಧಾರಣೆಯಾಗಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಹೇಳಿದರು.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಸಮಾಜ ಸೇವಾ ಕಾರ್ಯ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ ಯುಜಿಸಿ ಪ್ರಾಯೋಜಿತ ರಾಷ್ಟ್ರಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಭಯಮುಕ್ತ ವಾತಾವರಣದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುವುದೇ ಮಾನವ ಹಕ್ಕುಗಳ ಆಯೋಗದ ಉದ್ದೇಶವಾಗಿದೆ. ಬಡವರು-ಬಲ್ಲಿದರ ಮಧ್ಯೆ ಇರುವ ಕಂದರ ನಿವಾರಣೆಯಾಗಬೇಕು ಎಂದು ಅವರು ಸಲಹೆ ನೀಡಿದರು.
ಡಾ.ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿರುವ ಜನಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರಗತಿಯ ಜೊತೆಗೆ ಪ್ರತಿಯೊಬ್ಬರಿಗೂ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ನೀಡಬೇಕು. ಅವಕಾಶವಂಚಿತರಾದಲ್ಲಿ ಪ್ರತಿಭೆ ಕುಂಠಿತವಾಗುತ್ತದೆ. ಯುವಜನತೆ ಸಮಾನತೆಯ ದೃಢ ಸಂಕಲ್ಪದೊಂದಿಗೆ ವಿಶಾಲ ಮನೋಭಾವ ಹಾಗೂ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ, ಸಮಾಜ ಸೇವಾ ಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ. ಪರಶುರಾಮ ಮತ್ತು ಡೀನ್ ಪ್ರೊ. ಜೆ. ಮಹಾವೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.