ADVERTISEMENT

ಹಕ್ಕು ವಂಚಿತ ಮಕ್ಕಳಿಗೆ ಸುಧಾರಣೆ ಹಾದಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 10:40 IST
Last Updated 21 ಜನವರಿ 2011, 10:40 IST
ಹಕ್ಕು ವಂಚಿತ ಮಕ್ಕಳಿಗೆ ಸುಧಾರಣೆ ಹಾದಿ
ಹಕ್ಕು ವಂಚಿತ ಮಕ್ಕಳಿಗೆ ಸುಧಾರಣೆ ಹಾದಿ   

ಉಡುಪಿ: ಸಂಕಷ್ಟದಲ್ಲಿರುವ ಹಾಗೂ ಕಾನೂನಿನೊಡನೆ ಸಂಘರ್ಷದಲ್ಲಿರುವ ಹಕ್ಕುಗಳಿಂದ ವಂಚಿತರಾದ ಮಕ್ಕಳಿಗೆ ಸುಧಾರಣೆಯ ಹಾದಿ ತೋರಿಸುವ ಕಾರ್ಯಗಳು ನಡೆಯಬೇಕು ಎಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ನರೇಂದ್ರ ಕುಮಾರ್ ಗುಣಕಿ ಇಲ್ಲಿ ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಇಲಾಖೆ ವತಿಯಿಂದ  ನಿಟ್ಟೂರು ಸ್ತ್ರೀಸೇವಾ ನಿಕೇತನದಲ್ಲಿ ಗುರುವಾರ ಬಾಲನ್ಯಾಯ ಮಂಡಳಿ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳನ್ನು ಇತರರು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. 

ಅನ್ಯಾಯಕ್ಕೊಳಗಾಗಿರುವ ಹಾಗೂ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಮಕ್ಕಳ ರಕ್ಷಣೆಗೆ ಮತ್ತು ಪೋಷಣೆಗೆ ರಚಿಸಲಾಗಿರುವ ಕಾಯ್ದೆಯೇ ಮಕ್ಕಳ ನ್ಯಾಯ ಕಾಯ್ದೆ. ಈ ಕಾಯ್ದೆ ಪ್ರಕಾರ ನ್ಯಾಯ ಮಂಡಳಿ ವ್ಯಾಪ್ತಿಗೆ ಬರುವ ಮಗುವಿಗೆ 18 ವರ್ಷದೊಳಗಿರಬೇಕು ಎಂದರು.

ಬಾಲನ್ಯಾಯ ಮಂಡಲಿ ಅಧ್ಯಕ್ಷೆ ಸ್ವಪ್ನ ಗಣೇಶ್ ಬಾಲ ನ್ಯಾಯ ಮಂಡಳಿ ಬಗ್ಗೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗದಂತೆ ಎಚ್ಚರ ವಹಿಸುವುದಲ್ಲದೇ ಮಗುವಿನ ಹಿತದೃಷ್ಟಿ ಗಮನದಲ್ಲಿರಿಸಿಕೊಂಡು ಸೂಕ್ತ ಶಿಕ್ಷಣ ನೀಡಬೇಕು ಎಂದರು.

ಡಿವೈಎಸ್‌ಪಿ ಜಯಂತ ವಿ.ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ , ಹಿರಿಯ ನ್ಯಾಯಾಧೀಶರಾದ ಸಾವಿತ್ರಿ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುಮನಾ, ವೀಕ್ಷಣಾಲಯದ ಅಧೀಕ್ಷಕಿ ಜಯಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.