ADVERTISEMENT

ಸುರಕ್ಷತಾ ಕ್ರಮಕ್ಕೆ ಮುಂದಾದ ಜಿಲ್ಲಾ ಪೊಲೀಸ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:31 IST
Last Updated 10 ಫೆಬ್ರುವರಿ 2018, 8:31 IST

ಉಡುಪಿ: ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲಾ ಪೊಲೀಸರು ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಪ್ರತಿಬಂಧಕ ಕ್ರಮವಾಗಿ ರೌಡಿ ಪಟ್ಟಿಯಲ್ಲಿ ಹೆಸರಿರುವವ ಹಾಗೂ ಕೋಮು ಗಲಭೆಗೆ ಕಾರಣರಾದ, ಭಾಗಿಯಾದವರ ಮೇಲೆ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

‘ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಭದ್ರತಾ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 3,850 ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದಾರೆ. ಆ ಎಲ್ಲ ಪರವಾನಗಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ಮುಗಿದ ನಂತರ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಕಾಪಾಡುವ ಉದ್ದೇಶದಿಂದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರ ಮೇಲೆ ಪ್ರತಿಬಂಧಕ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ ನಕ್ಸಲರ ಓಡಾಟ ಇಲ್ಲ. ಆದರೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ನಕ್ಸಲರು ಕಾಣಿಸಿಕೊಂಡ ನಂತರ ಹಲವಾರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಬ್ರಿ, ಅಮಾಸೆಬೈಲಿನ ಜೆಡ್ಡಿನಗದ್ದೆ, ಶಂಕರನಾರಾಯಣ ಹಾಗೂ ಕಾರ್ಕಳ ಗ್ರಾಮಾಂತರ ಭಾಗದಲ್ಲಿ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್ ಇದ್ದು, ಅಲ್ಲೆಲ್ಲ ಕಾರಣ ಕೂಂಬಿಂಗ್ ಕಾರ್ಯಾಚರಣೆ ತೀರ್ವಗೊಳಿಸಲಾಗಿದೆ’ ಎಂದರು.

ADVERTISEMENT

‘ಚುನಾವಣೆ ಇರುವುದರಿಂದ ಶಾಂತಿಯುತ ವಾತಾವರಣವನ್ನು ಖಚಿತಪಡಿಸುವುದು ನಮ್ಮ ಕರ್ತವ್ಯ. ಆ ಹಿನ್ನೆಲೆಯಲ್ಲಿ ಪ್ರಯತ್ನ ಮುಂದುವರೆದಿದೆ. ಪ್ರತಿ ಗ್ರಾಮಕ್ಕೆ ತೆರಳುವ ಸಿಬ್ಬಂದಿ ಅಲ್ಲಿನ ಜನರೊಂದಿಗೆ ಮಾತನಾಡುತ್ತಿದ್ದಾರೆ. ತಿಂಗಳಿಗೆ ಎರಡು ಬಾರಿ ಗ್ರಾಮದಲ್ಲಿ ಸಭೆ ಸಹ ನಡೆಯಲಿದೆ. ಆದ್ದರಿಂದ ಆತಂಕಪಡುವಂತಹ ಸ್ಥಿತಿ ಇಲ್ಲ’ ಎಂದು ಹೇಳಿದರು. ನಕ್ಸಲ್ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡು ತಂಡವೂ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

* * 

ರೌಡಿಗಳು ಹಾಗೂ ಕೋಮು ಗಲಭೆಯಲ್ಲಿ ಭಾಗಿಯಾದವರ ಮೇಲೆ ಪ್ರತಿಬಂಧಕ ಕ್ರಮ ತೆಗೆದುಕೊಳ್ಳಲು ಈಗಾಗಲೇ ಆರಂಭಿಸಲಾಗಿದೆ.
ಲಕ್ಷ್ಮಣ್ ನಿಂಬರಗಿ
ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.