ADVERTISEMENT

ಆನಂದ ದೇವಾಡಿಗ ಕೊಲೆಗೆ ಕುರುಪ್ ಸಿನಿಮಾ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 13:29 IST
Last Updated 15 ಜುಲೈ 2022, 13:29 IST
ಆನಂದ ದೇವಾಡಿಗ, ಕೊಲೆಯಾದ ವ್ಯಕ್ತಿ
ಆನಂದ ದೇವಾಡಿಗ, ಕೊಲೆಯಾದ ವ್ಯಕ್ತಿ   

ಉಡುಪಿ/ಬೈಂದೂರು: ಬೈಂದೂರು ತಾಲ್ಲೂಕಿನ ಹೇನಬೇರು ಸಮೀಪದ ಅರಣ್ಯ ಇಲಾಖೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಆನಂದ ದೇವಾಡಿಗ ಎಂಬುವರನ್ನು ಕಾರಿನಲ್ಲಿ ಸಜೀವವಾಗಿ ಸುಟ್ಟುಹಾಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕುತೂಹಲಕಾರಿ ವಿಚಾರಗಳನ್ನು ಬಯಲಿಗೆಳೆದಿದ್ದಾರೆ.

ಕೊಲೆಗೆ ಸಿನಿಮಾ ಪ್ರೇರಣೆ: ಬಂಧಿತ ಆರೋಪಿ ಸದಾನಂದ ಶೇರೆಗಾರ್‌ ಮಲೆಯಾಳಂನ ಕುರುಪ್ ಸಿನಿಮಾದ ಅಪರಾಧ ಕೃತ್ಯಗಳಿಂದ ಪ್ರೇರೇಪಣೆಗೊಂಡು ಆನಂದ ದೇವಾಡಿಗ ಕೊಲೆಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.

ಕುರುಪ್ ಸಿನಿಮಾದಲ್ಲಿ ಪಾತ್ರಧಾರಿಯೊಬ್ಬ ವಿಮೆಯ ಹಣ ಪಡೆಯಲು ತನ್ನನ್ನೇ ಹೋಲುವ ವ್ಯಕ್ತಿಯನ್ನು ಹುಡುಕಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಿ ವಿಮೆ ಹಣ ಪಡೆದುಕೊಂಡಿರುತ್ತಾನೆ. ಅದೇ ಮಾದರಿಯಲ್ಲಿ ಸದಾನಂದ ಶೇರೆಗಾರ್ ಕೂಡ ತನ್ನ ವಯಸ್ಸಿನ ವ್ಯಕ್ತಿಯನ್ನು ಹುಡುಕಿ ಕಾರಿನಲ್ಲಿ ಸುಟ್ಟುಹಾಕಿ ತಾನೇ ಮೃತಪಟ್ಟಿರುವುದಾಗಿ ನಂಬಿಸಲು ಯತ್ನಿಸಿದ್ದ.

ADVERTISEMENT

ಕುರುಪ್ ಸಿನಿಮಾದಲ್ಲಿ ವಿಮೆಯ ಹಣ ಪಡೆಯಲು ಕೊಲೆ ನಡೆದರೆ, ಸದಾನಂದ ಶೇರೆಗಾರ್‌ 2019ರಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದ ಸದಾನಂದ ಶೇರೆಗಾರ್‌ ತನ್ನ ಸಹೋದರ, ಬಾಮೈದುನರು ಹಾಗೂ ಆಪ್ತೆ ಶಿಲ್ಪಾ ಬಳಿ ದುಃಖ ತೋಡಿಕೊಂಡಿದ್ದ. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ನೆರವು ನೀಡುವಂತೆ ಅಂಗಲಾಚಿದ್ದ. ಕುರುಪ್ ಸಿನಿಮಾದಲ್ಲಿ ಬರುವ ಅಪರಾಧ ದೃಶ್ಯದಂತೆ ತನ್ನನ್ನು ಹೋಲುವ ಹಾಗೂ ಸಮಾನ ವಯಸ್ಸಿನ ವ್ಯಕ್ತಿಯನ್ನು ಹುಡುಕುವಂತೆ ನೆರವು ಕೇಳಿದ್ದ.

ಅದರಂತೆ, ಶಿಲ್ಪಾಗೆ ಪರಿಚಿತನಾಗಿದ್ದ ಕಾರ್ಕಳದಲ್ಲಿ ಗಾರೆ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗ ಎಂಬ ವ್ಯಕ್ತಿಯನ್ನು ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಜುಲೈ 12ರಂದು ಆನಂದ ದೇವಾಡಿಗರನ್ನು ಮನೆಗೆ ಕರೆಸಿಕೊಂಡು ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕಂಠಪೂರ್ತಿ ಕುಡಿಸಿ ನಿದ್ರೆಗೆ ಜಾರಿದ ಬಳಿಕ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಬೈಂದೂರಿನ ಯೇನಬೇರು ಸಮೀಪದ ನಿರ್ಜನ ಪ್ರದೇಶಕ್ಕೆ ಕರೆತರಲಾಗಿತ್ತು. ಮಧ್ಯರಾತ್ರಿಯಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ಆನಂದ ದೇವಾಡಿಗ ಅವರನ್ನು ದಹನ ಮಾಡಲಾಗಿತ್ತು.

ಕೃತ್ಯದ ಬಳಿಕ ಸದಾನಂದ ಶೇರಿಗಾರ್ ಶಿಲ್ಪಾ ಜತೆ ಬೆಂಗಳೂರು ಬಸ್‌ ಹತ್ತಿದ್ದ. ಮಾರ್ಗ ಮಧ್ಯೆ ಮನಸ್ಸು ಬದಲಾಯಿಸಿ ಹಾಸನ ಬಸ್‌ ನಿಲ್ದಾಣದಲ್ಲಿಯೇ ಇಳಿದು, ಮೂಡುಬಿದರೆ ಬಸ್‌ ಹತ್ತಿದ್ದ. ಮೂಡುಬಿದರೆಯಿಂದ ಕಾರ್ಕಳಕ್ಕೆ ಬಂದು ಇಳಿಯುತ್ತಿದ್ದಂತೆ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ಪ್ರಕರಣವನ್ನು ಬಿಚ್ಚಿಟ್ಟರು.

ಸಿಕ್ಕಿಬಿದ್ದಿದ್ದು ಹೇಗೆ?

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರ್‌ಎಫ್‌ಎಸ್‌ಎಲ್ ತಜ್ಞರ ಸಹಾಯದಿಂದ ಸುಟ್ಟು ಕರಕಲಾಗಿದ್ದ
ಕಾರಿನ ನಂಬರ್ ಹಾಗೂ ಚೇಸಿ ನಂಬರ್‌ ಕಲೆಹಾಕಿ ಕಾರಿನ ಮಾಲೀಕನ ವಿಳಾಸ ಪತ್ತೆ ಹಚ್ಚಿದ್ದರು. ತಜ್ಞರು ನೀಡಿದ ನೋಂದಣಿ ಸಂಖ್ಯೆಯ ಕಾರು ಜಿಲ್ಲೆಯ 2 ಟೋಲ್‌ಗಳನ್ನು ದಾಟಿಕೊಂಡು ಹೋಗಿದ್ದು ಸ್ಪಷ್ಟವಾಗಿತ್ತು. ಕಾರಿನಲ್ಲಿದ್ದ ಮಹಿಳೆ ಟೋಲ್‌ನಲ್ಲಿ ಶುಲ್ಕ ಕಟ್ಟಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಲಭ್ಯವಾಗಿದ್ದವು. ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್‌ಐ ವಿನಯ್‌ ಹಾಗೂ ಬೈಂದೂರು ಪಿಎಸ್‌ಐ ಪವನ್ ಒಳಗೊಂಡ ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿತ್ತು. ತನಿಖೆಯ ಜಾಡು ಹಿಡಿದು ಹೊರಟ ತಂಡಕ್ಕೆ ಜುಲೈ 13ರಂದು ಸದಾನಂದ ಶೇರಿಗಾರ್‌ ಸಹೋದರನಿಗೆ ಕರೆ ಮಾಡಿ ನಾಪತ್ತೆ ದೂರು ನೀಡುವಂತೆ ತಿಳಿಸಿದ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಪ್ರಕರಣಕ್ಕೆ ತಿರುವು ನೀಡಿ ಆರೋಪಿಗಳನ್ನು ಬಂಧಿಸಲು ನೆರವಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

‘ಬಟ್ಟೆ ಬದಲಿಸಿದ್ದ ಆರೋಪಿಗಳು’

ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಆರೋಪಿಗಳು ಕೊಲೆಗೂ ಮುನ್ನ ಆನಂದ ದೇವಾಡಿಗರಿಗೆ ಆರೋಪಿ ಸದಾನಂದ ಶೇರಿಗಾರ್ ಬಟ್ಟೆ ಹಾಕಿದ್ದರು. ಮದ್ಯದ ಅಮಲಿನಲ್ಲಿದ್ದ ಆನಂದ ದೇವಾಡಿಗರನ್ನು ಕಾರಿನ ಹಿಂಬದಿಯ ಸೀಟಿನಲ್ಲಿ ಕೂರಿಸಿ 7 ಲೀಟರ್‌ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ್ದರು. ಕಾರು ಸಂಪೂರ್ಣವಾಗಿ ಸುಟ್ಟುಹೋದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಿದ್ದರು.

₹ 50,000 ಬಹುಮಾನ ಘೋಷಣೆ

ಆನಂದ ದೇವಾಡಿಗ ಕೊಲೆ ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿರುವ ಬೈಂದೂರು ಪೊಲೀಸರ ತಂಡಕ್ಕೆ ಐಜಿಪಿ ದೇವಜ್ಯೋತಿ ರೇ ₹ 50,000 ಬಹುಮಾನ ಘೋಷಿಸಿದ್ದಾರೆ. ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.