ADVERTISEMENT

ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ದ್ವಾರಬಂಧ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 4:44 IST
Last Updated 6 ಜುಲೈ 2025, 4:44 IST
   

ಉಡುಪಿ: ತಾಲ್ಲೂಕಿನ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ವಿಜಯನಗರ ಕಾಲದ ದಶಾವತಾರ ಶಿಲ್ಪ ಪಟ್ಟಿಕೆಯ ದ್ವಾರಬಂಧ ಕಂಡುಬಂದಿದೆ ಎಂದು ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಚಿನ ದ್ವಾರಬಂಧವು ಸುಮಾರು 4.5 ಅಡಿ ಎತ್ತರ ಮತ್ತು 3.5 ಅಡಿ ಅಗಲವಿದೆ. ಅಡ್ಡಪಟ್ಟಿಕೆಯ ಮೇಲೆ ಗಜಲಕ್ಷ್ಮಿಯ ಲಲಾಟ ಬಿಂಬವಿದೆ. ಎಡ– ಬಲದ ಲಂಭ ಪಟ್ಟಿಕೆಗಳ ಮೇಲೆ ಕ್ರಮವಾಗಿ ಅಂಜಲೀ ಮುದ್ರೆಯಲ್ಲಿ ನಿಂತಿರುವ ಆಂಜನೇಯ, ವ್ಯಾಳಿ, ವ್ಯಾಳಿಯ ಮುಖದಿಂದ ಹೊರಟ ಲತಾ ಕೋಷ್ಟಕಗಳ ಮಧ್ಯೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಮತ್ತು ವಾಮನಾವತಾರದ ಶಿಲ್ಪಗಳಿವೆ ಎಂದು ಅವರು ತಿಳಿಸಿದ್ದಾರೆ.

ಉನ್ನತ ಪೀಠದ ಮೇಲೆ ಕುಳಿತಿರುವ ಲಕ್ಷ್ಮಿಯ ಎಡ, ಬಲದಲ್ಲಿ ಆನೆಗಳು ಪವಿತ್ರ ಕಳಸಗಳಿಂದ ಅಭಿಷೇಕ ಮಾಡುತ್ತಿವೆ. ಆನೆಗಳ ಮೇಲ್ಭಾಗದಲ್ಲಿ ಸೂರ್ಯ– ಚಂದ್ರರ ರೇಖಾ ವಿನ್ಯಾಸಗಳು ಅಡ್ಡಪಟ್ಟಿಕೆಯ ಮೇಲಿವೆ. ನಂತರ ಪರುಶುರಾಮ, ರಾಮ, ಕಾಳಿಂಗಮರ್ದನ ಬೆಣ್ಣೆ ಕೃಷ್ಣ, ಬೆತ್ತಲೆ ಬುದ್ಧ, ಕಲ್ಕಿ ಮತ್ತು ಅಂಜಲೀ ಮುದ್ರೆಯಲ್ಲಿ ನಿಂತಿರುವ ಗರುಡನ ಶಿಲ್ಪಗಳಿವೆ ಎಂದಿದ್ದಾರೆ.

ADVERTISEMENT

16ನೇ ಶತಮಾನದ ಶಿಲ್ಪ ಕಲಾಕೃತಿ: ಈ ದ್ವಾರಬಂಧದ ದಶಾವತಾರ ಶಿಲ್ಪಗಳಲ್ಲಿ ಬೆಣ್ಣೆಕೃಷ್ಣ ಎಂಟನೇ ಅವತಾರವಾಗಿ ಚಿತ್ರಿಸಲ್ಪಟ್ಟಿದ್ದಾನೆ. ಆದ್ದರಿಂದ ಈ ಕಂಚಿನ ದ್ವಾರಬಂಧ 16ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ ಶಿಲ್ಪ ಕಲಾಕೃತಿ ಎಂದು ನಿರ್ಧರಿಸಬಹುದು. ಒಂಬತ್ತನೇ ಅವತಾರವಾಗಿ ಕಂಡುಬರುವ ಬೆತ್ತಲೆಯಾಗಿ ನಿಂತಿರುವ ಬುದ್ಧನ ಶಿಲ್ಪ ಅತ್ಯಂತ ಕುತೂಹಲಕಾರಿಯಾಗಿದ್ದು. ಇದೇ ರೀತಿಯ ಶಿಲ್ಪ ಶೃಂಗೇರಿಯ ವಿದ್ಯಾಶಂಕರ ದೇವಾಲಯದ ಭಿತ್ತಿಯಲ್ಲಿ ಕಂಡುಬರುತ್ತದೆ. ಕಂಚಿನ ದ್ವಾರಬಂಧದ ಶಿಲ್ಪಗಳು ಸಂಪೂರ್ಣವಾಗಿ ವಿಜಯನಗರ ಶೈಲಿಯಲ್ಲಿವೆ ಎಂದು ಮುರುಗೇಶಿ ತಿಳಿಸಿದ್ದಾರೆ.

ದೇವಾಲಯದ ಆನುವಂಶಿಕ ಮೊಕ್ತೇಸರ ಪ್ರಮೋದ್ ರೈ ಪಳಜೆ, ಆಡಳಿತಾಧಿಕಾರಿ ಗುರುರಾಜ್, ಅರ್ಚಕ ವೃಂದ, ಆಡಳಿತ ಸಮಿತಿ ಸದಸ್ಯರು ಅಧ್ಯಯನಕ್ಕೆ ನೆರವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚಾರಿತ್ರಿಕ ಮಹತ್ವ

ಅನಂತಪದ್ಮನಾಭ ದೇವಾಲಯದ ಒಳ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಕಾಲದ ಶಾಸನವಿದೆ. ಆ ಶಾಸನದಲ್ಲಿ ಚಕ್ರವರ್ತಿಯು, ದೇವಾಲಯದ ಅನಂತ ದೇವರಿಗೆ ನಿತ್ಯವೂ ನಡೆಯುವ ಅಮ್ರುತಪಡಿ, ನಂದಾದೀಪ, ಶ್ರೀಬಲಿ, ನೈವೇದ್ಯ ಮತ್ತು ಪಂಚಪರ್ವಗಳಿಗೆ ಅಪಾರ ಪ್ರಮಾಣದ ಭೂದಾನ ನೀಡಿರುವುದು, ದೇವಾಲಯದ ಪಾರುಪತ್ಯ ನಡೆಸಲು ಸೂರಪ್ಪಯ್ಯ ಎಂಬ ಅಧಿಕಾರಿಯನ್ನು ನೇಮಿಸಿದ ಆದೇಶವನ್ನು ಶಾಸನ ಒಳಗೊಂಡಿದೆ. ಸಾಮಾಜ್ಯದ ಆರ್ಥಿಕ ಬಲದಿಂದ ಸೂರಪ್ಪಯ್ಯ ಅಧಿಕಾರಿ ಇಡೀ ದೇವಾಲಯ, ತೀರ್ಥಮಂಟಪವನ್ನು ಶಿಲಾಮಯವಾಗಿ ಜೀರ್ಣೋದ್ಧಾರ ಮಾಡುತ್ತಾನೆ. ಬಹುಶಃ ಅದೇ ಸಮಯದಲ್ಲಿ ದೇವಾಲಯದ ಗರ್ಭಗುಡಿಯ ಪ್ರವೇಶ ದ್ವಾರಕ್ಕೆ ಕಂಚಿನ ದಶಾವತಾರ ಶಿಲ್ಪಗಳ ಪಟ್ಟಿಕೆಯನ್ನೂ ಮಾಡಿಸಲಾಗಿದೆ. ಕೃಷ್ಣದೇವರಾಯನು ಒರಿಸ್ಸಾದ ಗಜಪತಿಗಳ ಮೇಲೆ ದಾಳಿ ಮಾಡಿ, ಅದರ ಯಶಸ್ಸಿನ ನೆನಪಿಗಾಗಿ ಒರಿಸ್ಸಾದಿಂದ ಬೆಣ್ಣೆಕೃಷ್ಣನ ಮೂರ್ತಿಯನ್ನು ರಾಜಧಾನಿಗೆ ತರುತ್ತಾನೆ. ಹಂಪಿಯಲ್ಲಿ ಕೃಷ್ಣನಿಗಾಗಿ ಭವ್ಯವಾದ ದೇಗುಲ ನಿರ್ಮಾಣ ಮಾಡುತ್ತಾನೆ. ಬಳಿಕ ಬೆಣ್ಣೆ ಕೃಷ್ಣ ವಿಜಯನಗರ ಸಾಮ್ರಾಜ್ಯದಲ್ಲಿ ಜನಪ್ರಿಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಮುರುಗೇಶಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.