ಉಡುಪಿ: ರಾಜ್ಯವ್ಯಾಪಿ ಎಫ್‌ಆರ್‌ಎಸ್ ಕ್ರಮ ನಿಲ್ಲಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ವತಿಯಿಂದ ಗುರುವಾರ ಕಪ್ಪು ದಿನಾಚರಣೆ ಆಚರಿಸಲಾಯಿತು.
ಉಡುಪಿಯಲ್ಲಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿ.ಡಿ.ಪಿ.ಒ) ವಿಜಯ ನಾಯಕ್ ಅವರಿಗೆ ಹಾಗೂ ಕೇಂದ್ರ ಸಚಿವೆ ಅನುಪಮ ದೇವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕಕ್ಕಿರುವ ಏಕೈಕ ಯೋಜನೆ ಐಸಿಡಿಎಸ್ ಮಾತ್ರ ಈ ಯೋಜನೆಗೆ ಇಂದು 50 ವರ್ಷಗಳಾಗುತ್ತಾ ಬರುತ್ತಿದೆ. ಈ ಯೋಜನೆಯನ್ನು ಸರಳೀಕರಿಸಿ ಫಲಾನುಭವಿಗಳನ್ನು ಆಕರ್ಷಿಸಲು ಸರ್ಕಾರಗಳು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ, ಅದರ ಬದಲಾಗಿ ಸಂಕೀರ್ಣಗೊಳಿಸಲಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ಕೊಡದೇ ಮುಖಚರ್ಯೆ ಗುರುತಿಸುವ ಕ್ರಮ(ಎಫ್‌ಆರ್‌ಎಸ್) ಅಳವಡಿಸಿದ್ದರಿಂದ ಕ್ಷೇತ್ರ ಮಟ್ಟದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಶೇ 60ರಷ್ಟು ತನ್ನ ಪಾಲಿನ ವಂತಿಗೆಯನ್ನು ನೀಡಬೇಕಾದ ಕೇಂದ್ರ ಸರ್ಕಾರ ಎಫ್‌ಆರ್‌ಎಸ್‌ನಂತಹ ನಿರ್ಬಂಧಗಳನ್ನು ಹಾಕುವ ಮುಖಾಂತರ ತನ್ನ ಪಾಲಿನ ಹಣ ಕಡಿಮೆ ಮಾಡಲು ಮುಂದಾಗಿದೆ ಎಂದೂ ಆರೋಪಿಸಿದರು.
ನಿಯೋಗದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಅಂಗನವಾಡಿ ನೌಕರರ ಸಂಘದ ಸುನೀತ ನಟರಾಜ್, ಚಿತ್ರಕಲಾ ಕೆ., ಮಂಜುಳ, ಸುಮತಿ ಕೇದಾರ್, ಪ್ರೇಮಲತಾ, ಸರೋಜ, ಸುನಂದಾಕಾಂತಿ, ಸುಮತಿ ಆಚಾರ್ಯ, ಸುಮತಿ ಕನರ್ಪಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.