
ಉಡುಪಿ: ಉಡುಪಿ ನಗರ ವ್ಯಾಪ್ತಿಯ ಡಿಜಿಟಲ್ ಆ್ಯಪ್ ಆಧಾರಿತ ಆಟೊಗಳು ಸರ್ಕಾರದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಮ್ಮ ಯಾತ್ರಿ ಆ್ಯಪ್ ಹಾಗೂ ರ‍್ಯಾಪಿಡೊ ಆ್ಯಪ್ ಆಟೊ ಸೇವೆಗಳ ಕುರಿತು ಚರ್ಚಿಸಲು ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಣಿಪಾಲದಲ್ಲಿ ಡಿಜಿಟಲ್ ಆ್ಯಪ್ ಆಧಾರಿತ ಬಾಡಿಗೆ ಆಟೊಗಳ ಸಂಚಾರದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆ್ಯಪ್ ಆಧಾರಿತ ಕೆಲವು ಸಂಸ್ಥೆಗಳು ಸೇವೆಗಳನ್ನು ಒದಗಿಸುತ್ತಿವೆ. ಈ ಬಗ್ಗೆ ಸರ್ಕಾರದ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಮುಂದೆ ಹಾಜರುಪಡಿಸಿದ್ದಲ್ಲಿ ಸ್ಥಳೀಯ ಆಟೋ ಚಾಲಕರ ಯೂನಿಯನ್‌ಗಳ ಪದಾಧಿಕಾರಿಗಳು ಹಾಗೂ ಆ್ಯಪ್ ಆಧಾರಿತ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಉಡುಪಿ ನಗರದ ವಲಯ -1 ರಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಆಟೊ ರಿಕ್ಷಾಗಳು ನೋಂದಣಿ ಮಾಡಿಕೊಂಡು ಸಂಚರಿಸುತ್ತಿದ್ದು, ಆಟೊ ನಿಲ್ದಾಣಗಳಲ್ಲಿ ಚಾಲಕರು ಸರದಿಯ ಅನ್ವಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅವರಲ್ಲಿ ಕೆಲವರು ಹಲವು ವರ್ಷಗಳಿಂದ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಅವರ ಅಭಿಪ್ರಾಯಗಳನ್ನು ಪಡೆಯಲಾಗುವುದು. ಪ್ರಸ್ತುತ ಚಾಲನೆಯಲ್ಲಿರುವ ಪ್ರತಿಯೊಂದು ಆಟೊಗಳು ಕಡ್ಡಾಯವಾಗಿ ಮೀಟರ್ ಬಳಕೆ ಮಾಡಿ, ಚಲಾಯಿಸಬೇಕು ಎಂದು ಹೇಳಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರ ಭಾಗದಲ್ಲಿ ಜನರ ಹಾಗೂ ಪ್ರವಾಸಿಗರ ಬೇಡಿಕೆ ಮತ್ತು ಆಟೊ ನಿಲ್ದಾಣಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಡಿಗೆ ಮಾಡಲು ಅವಕಾಶ ನೀಡಬೇಕು. ನಿಲ್ದಾಣಗಳಲ್ಲಿ ರಿಕ್ಷಾ ಚಾಲಕರಿಗೆ ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸಬೇಕು ಎಂದರು.
ಡಿಜಿಟಲ್ ಆ್ಯಪ್ ಆಧಾರಿತ ಆಟೊ ಸಂಚಾರದಿಂದ ನಗರದಲ್ಲಿ ಸುಮಾರು 30 ವರ್ಷಗಳಿಂದ ಆಟೊ ಚಾಲನೆ ಮಾಡಿ, ಜೀವನೋಪಾಯ ನಡೆಸುತ್ತಿರುವವರಿಗೆ ಉಂಟಾಗುವ ಸಮಸ್ಯೆಗಳನ್ನು ಚರ್ಚಿಸಿ, ನಂತರ ಡಿಜಿಟಲ್ ಆ್ಯಪ್ ಆಧರಿತ ಆಟೊಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ಆ್ಯಪ್ ಆಧರಿತ ಆಟೊ ಸಂಚಾರದಿಂದ ಇತರೆ ಆಟೊ ಚಾಲಕರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ವಲಯ-1, ವಲಯ-2 ರ ಆಟೊಗಳನ್ನು ಸರಳವಾಗಿ ಗುರುತಿಸಲು ಕಲರ್ ಕೋಡಿಂಗ್ ಅಳವಡಿಕೆ ವಿಚಾರವನ್ನು ಆಟೊ ರಿಕ್ಷಾ ಚಾಲಕರು ಸಭೆಯ ಗಮನಕ್ಕೆ ತಂದರು.
ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಂತೋಷ್ ಶೆಟ್ಟಿ, ಆಟೊ ರಿಕ್ಷಾ ಯೂನಿಯನ್ ಪದಾಧಿಕಾರಿಗಳು, ಆಟೊ ರಿಕ್ಷಾ ಚಾಲಕರು ಹಾಗೂ ಮಾಲಕರುಗಳು, ನಮ್ಮ ಯಾತ್ರಿ ಹಾಗೂ ರ‍್ಯಾಪಿಡ್ ಆ್ಯಪ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
‘ಚರ್ಚಿಸಿ ಅನುಮತಿ ನೀಡಲಾಗುವುದು’
ಆ್ಯಪ್ ಆಧರಿತ ಆಟೊಗಳ ಸಂಚಾರವನ್ನು ಅಭಿವೃದ್ಧಿಪಡಿಸಿದಾಗ ಇತರ ಆಟೊ ಚಾಲಕರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು. ವಲಯ-2 ರಲ್ಲಿ ಪರವಾನಗಿ ಪಡೆದು ನಗರ ವ್ಯಾಪ್ತಿಯಲ್ಲಿ ಆಟೊ ಚಾಲನೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಟೊ ನಿಲ್ದಾಣಗಳಲ್ಲಿ ಈ ಹಿಂದೆ ನೋಂದಣಿ ಹೊಂದಿದವರಿಗೆ ಮಾತ್ರ ಅವಕಾಶ ಇದೆ. ನಿಲ್ದಾಣ ಹೊಂದದೇ ಇರುವ ಆಟೊ ಚಾಲಕರು ನೋಂದಣಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಲ್ಲಿನ ಆಟೊ ದಟ್ಟಣಿ ನೋಡಿ ನಗರಸಭೆಯ ಪೌರಾಯುಕ್ತರೊಂದಿಗೆ ಚರ್ಚಿಸಿ ಅನುಮತಿ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.