ADVERTISEMENT

ಉಡುಪಿ: ‘ಸೊರಗು’ ರೋಗದಿಂದ ಸೊರಗಿದ ಕಾಳು ಮೆಣಸು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:10 IST
Last Updated 17 ಸೆಪ್ಟೆಂಬರ್ 2025, 5:10 IST
ಕಾಳುಮೆಣಸಿನ ಬಳ್ಳಿಗೆ ಶೀಘ್ರ ಸೊರಗು ರೋಗ ಬಾಧಿಸಿರುವುದು
ಕಾಳುಮೆಣಸಿನ ಬಳ್ಳಿಗೆ ಶೀಘ್ರ ಸೊರಗು ರೋಗ ಬಾಧಿಸಿರುವುದು   

ಉಡುಪಿ: ಅತಿಯಾದ ಮಳೆಯಿಂದಾಗಿ ಅಡಿಕೆ ತೋಟಗಳಿಗೆ ಹಾಗೂ ತೆಂಗಿಗೆ ಕೊಳೆರೋಗ ಬಾಧಿಸಿ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಕಾಳುಮೆಣಸಿಗೂ ಶೀಘ್ರ ಸೂರಗು ರೋಗ ತೀವ್ರವಾಗಿ ಬಾಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಕೆಲವು ವರ್ಷಗಳಿಂದ ಕಾಳು ಮೆಣಸು ಕೃಷಿಗೆ ಸೊರಗು ರೋಗದ ಹಾವಳಿ ಅಷ್ಟೇನೂ ಇರಲಿಲ್. ಆದರೆ ಈ ವರ್ಷ ರೋಗದಿಂದಾಗಿ ಕಾಳುಮೆಣಸಿನ ಬಳ್ಳಿಗಳೇ ನಾಶವಾಗಿವೆ ಎನ್ನುತ್ತಾರೆ ರೈತರು.

ಕಾರ್ಕಳ, ಕುಂದಾಪುರ, ಹೆಬ್ರಿ, ಬೈಂದೂರು ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರೈತರು ಉಪ ಬೆಳೆಯಾಗಿ ಕಾಳುಮೆಣಸನ್ನು ಬೆಳೆಯುತ್ತಾರೆ. ಇದು ರೈತರಿಗೆ ಸಣ್ಣ ಆದಾಯದ ಮೂಲವೂ ಆಗಿದೆ.

ADVERTISEMENT

ಅಡಿಕೆ ಮರಕ್ಕೆ ಕಾಳುಮೆಣಸಿನ ಬಳ್ಳಿಗಳನ್ನು ಬಿಡುವ ಮೂಲಕ ರೈತರು ಈ ಕೃಷಿಯನ್ನು ಮಾಡುತ್ತಾರೆ. ತೆಂಗಿನ ಮರಗಳಿಗೂ ಬಳ್ಳಿಗಳನ್ನು ಬಿಡಲಾಗುತ್ತದೆ.

ಸದ್ಯ ಕಾಳು ಮೆಣಸು ಕೆ.ಜಿಗೆ ಅಂದಾಜು ₹700ರಷ್ಟು ಬೆಲೆ ಇದೆ. ಆದರೆ ಶೀಘ್ರ ಸೊರಗು ರೋಗ ಕಾಣಿಸಿಕೊಂಡಿರುವುದರಿಂದ ಇಳುವರಿ ಸಾಕಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಾಳುಮೆಣಸಿನ ಬಳ್ಳಿಯನ್ನು ನೆಟ್ಟು ಸರಿಯಾಗಿ ಇಳುವರಿ ಬರಬೇಕಾದರೆ ನಾಲ್ಕು ವರ್ಷವಾದರೂ ಬೇಕು. ಶೀಘ್ರ ಸೊರಗು ರೋಗ ಬಾಧಿಸಿರುವುದರಿಂದ ಕಾಳುಮೆಣಸಿನ ಬಳ್ಳಿಗಳ ಎಲೆಗಳು ಉದುರುವುದರ ಜೊತೆಗೆ ಬಳ್ಳಿಯೇ ಸತ್ತು ಹೋಗುತ್ತಿದೆ ಎನ್ನುತ್ತಾರೆ ರೈತರು.

ಜನವರಿಯಿಂದ ಮಾರ್ಚ್ ತಿಂಗಳವರೆಗೆ ಕಾಳುಮೆಣಸಿನ ಕೊಯ್ಲು ನಡೆಯುತ್ತದೆ. ಕಾಳುಮೆಣಸು ಹಣ್ಣಾಗಲು ಪ್ರಾರಂಭವಾದಾಗ ಕೊಯ್ಲು ಮಾಡುತ್ತೇವೆ. ಆದರೆ, ಈ ಬಾರಿಯ ಸ್ಥಿತಿ ಗಮನಿಸಿದರೆ ಬಾರಿ ಪ್ರಮಾಣದಲ್ಲಿ ಇಳುವರಿ ಕುಸಿತವಾಗುವ ಸಾಧ್ಯತೆ ಇದೆ ಎಂದು ಕಾರ್ಕಳದ ರೈತ ಶೈಲೇಶ್‌ ಮರಾಠೆ ತಿಳಿಸಿದ್ದಾರೆ.

ಅಡಿಕೆ ಮರಕ್ಕೆ ಸಕಾಲದಲ್ಲಿ ಬೋರ್ಡೊ ದ್ರಾವಣ ಸಿಂಪಡಿಸಲು ಮರ ಹತ್ತುವ ಕಾರ್ಮಿಕರು ಸಿಗುವುದಿಲ್ಲ, ಇನ್ನು ಕಾಳುಮೆಣಸಿಗೆ ಬೋರ್ಡೊ ದ್ರಾವಣ ಸಿಂಪಡಿಸುವುದು ದೂರದ ಮಾತಾಗಿದೆ ಎನ್ನುತ್ತಾರೆ ಅವರು.

ಸುಮಾರು ಒಂದೂವರೆ ತಿಂಗಳಿಂದ ಕಾಳುಮೆಣಸಿನ ಬೆಳೆಗೆ ಸೊರಗು ರೋಗ ಕಾಣಿಸಿಕೊಂಡಿದೆ. ಕೆಲವೆಡೆ ರೋಗ ಉಲ್ಭಣವಾಗಿದೆ. ಮಳೆಗಾಲಕ್ಕೂ ಮೊದಲು ಕಾಂಪೋಸ್ಟ್ ಗೊಬ್ಬರದ ಜೊತೆಗೆ ಟ್ರೈಕೋಡರ್ಮ ಸಿಂಪಡಿಸಿದರೆ ಕಾಳು ಮೆಣಸಿನ ಬಳ್ಳಿಗಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ಯಾವಾಗ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಜಾಸ್ತಿಯಾಗುತ್ತದೊ ಆಗ ಬೆಳೆಗಳಿಗೆ ರೋಗಗಳು ಬಾಧಿಸುತ್ತವೆ. ಈ ಬಾರಿ ಮಳೆಯ ಪ್ರಮಾಣ ಜಾಸ್ತಿಯಾಗಿರುವುದರಿಂದಾಗಿ ಕಾಳುಮೆಣಸಿಗೆ ಶೀಘ್ರ ಸೊರಗು ರೋಗ ಹರಡಿದೆ. ಶೀಘ್ರ ಸೊರಗು ರೋಗವು ಒಂದು ಬಳ್ಳಿಗೆ ಬಾಧಿಸಿದರೆ ಅದು ತೋಟದ ಎಲ್ಲಾ ಬಳ್ಳಿಗಳಿಗೂ ಹರಡುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು.

‘ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು’

ಕರಾವಳಿ ಭಾಗದಲ್ಲಿ ಅತಿಯಾಗಿ ಮಳೆ ಬಂದು ಕೃಷಿನಾಶ ಸಂಭವಿಸುವುದರಿಂದ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸಿಗೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬೇಕು. ಈಗಾಗಲೇ ಜಿಲ್ಲೆಯ 12 ಸಾವಿರ ಮಂದಿ ರೈತರು ಅಡಿಕೆ ಹಾಗೂ ಕಾಳುಮೆಣಸಿಗೆ ಬೆಳೆವಿಮೆ ಮಾಡಿಸಿಕೊಂಡಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್‌ ಕುಮಾರ್‌ ತಿಳಿಸಿದ್ದಾರೆ. ಕಾಳಮೆಣಸಿನ ಸೊರಗು ರೋಗವನ್ನು ಬೋರ್ಡೊ ದ್ರಾವಣ ಸಿಂಪಡಿಸಿದರೆ ನಿಯಂತ್ರಿಸಬಹುದು. ಆದರೆ. ಶೀಘ್ರ ಸೊರಗು ರೋಗಕ್ಕೆ ಕ್ಯಾಪ್ಟನ್ ಅಥವಾ ಬಾವಿಸ್ಟಿನ್ ರಾಸಾಯನಿಕವನ್ನು 1 ಲೀಟರ್‌ ನೀರಿಗೆ 2 ಗ್ರಾಂನಷ್ಟು ಹಾಕಿ ಮಿಶ್ರಣ ಮಾಡಿ ಇಡೀ ಬಳ್ಳಿಗೆ ಸಿಂಪಡಿಸಬೇಕು. ಇದು ಶಿಲೀಂಧ್ರ ರೋಗವಾಗಿರುವುದರಿಂದ ಬಳ್ಳಿಯ ಬುಡಕ್ಕೆ 2ರಿಂದ 3 ಲೀಟರ್‌ ದ್ರಾವಣವನ್ನು ಸುರಿಯಬೇಕು ಎಂದು ಅವರು ಹೇಳಿದ್ದಾರೆ.

ಸೊರಗು ರೋಗ ಕಾಣಿಸಿಕೊಂಡಾಗ ಬೋರ್ಡೊ ದ್ರಾವಣ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಬೋರ್ಡೊ ದ್ರಾವಣ ಸಿಂಪಡಿಸಲು ಸಾಧ್ಯವಾಗಿಲ್ಲ
ರಾಮಕೃಷ್ಣ ಶರ್ಮ, ಬಂಟಕಲ್ಲು ರೈತ ಮುಖಂಡ
ಸಾಮಾನ್ಯವಾಗಿ ಮಳೆಗಾಲ ಮುಗಿಯುವ ವೇಳೆಗೆ ಕಾಳು ಮೆಣಸಿಗೆ ಸೊರಗು ರೋಗ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಅಧಿಕ ಪ್ರಮಾಣದಲ್ಲಿ ರೋಗ ಕಾಣಿಸಿಕೊಂಡಿದೆ
ಶೈಲೇಶ್ ಮರಾಠೆ, ರೈತ
ಶೀಘ್ರ ಸೊರಗು ರೋಗ ಬಾಧಿಸಿ ಕಾಳುಮೆಣಸು ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.