ಉಡುಪಿ/ ಮಂಗಳೂರು: ಬೆಳಗಾವಿಯ ಜಾಫರ್ ಖಾನ್ ಮತ್ತು ಬೆಂಗಳೂರಿನ ನಿಯೋಲ್ ಅನಾ ಕರ್ನೆಲಿಯೊ ಅವರು ಕ್ರಮವಾಗಿ ಕರ್ನಾಟಕ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಲಾಂಗ್ ಜಂಪ್‌ನಲ್ಲಿ 7.44 ಮೀ. ದೂರ ಜಿಗಿದು ಚಿನ್ನ ಗೆದ್ದ ಜಾಫರ್ ಖಾನ್ ಅವರು ಕೂಟದಲ್ಲಿ ಒಟ್ಟು 1,016 ಪಾಯಿಂಟ್ಸ್ ಕಲೆಹಾಕಿದರು.
ನಿಯೋಲ್ ಅನ್ನಾ ಕರ್ನೆಲಿಯೊ ಅವರು 100 ಮೀ. ಓಟವನ್ನು 11 ನಿ.93 ಸೆ.ನಲ್ಲಿ ಪೂರ್ಣಗೊಳಿಸಿ ಚಿನ್ನ ಗೆದ್ದರು. ಅವರು ಒಟ್ಟು 1005 ಪಾಯಿಂಟ್ಸ್ ಗಿಟ್ಟಿಸಿಕೊಂಡರು.
ಕೊಕ್ಕೊ: ಪುರುಷರ ವಿಭಾಗದ ಕೊಕ್ಕೊ ಫೈನಲ್‌ನಲ್ಲಿ ಬೆಳಗಾವಿ ತಂಡವು 25–19 ಪಾಯಿಂಟ್‌ಗಳಿಂದ ಬಾಗಲಕೋಟೆ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದಿತು. ಧಾರವಾಡ ಹಾಗೂ ರಾಯಚೂರು ತಂಡಗಳು ಕಂಚಿನ ಪದಕ ಗೆದ್ದವು. ಕೊಕ್ಕೊ ಮಹಿಳೆಯರ ವಿಭಾಗದ ರೋಚಕ ಫೈನಲ್‌ನಲ್ಲಿ ಬೆಳಗಾವಿ ತಂಡವು ಮೈಸೂರು ತಂಡವನ್ನು 13–12ರಿಂದ ರಿಂದ ಸೋಲಿ ಚಿನ್ನ ಗೆದ್ದಿತು. ಬೆಂಗಳೂರು ಹಾಗೂ ರಾಯಚೂರು ತಂಡಗಳು ಕಂಚಿನ ಪದಕ ಪಡೆದವು.
ಹ್ಯಾಂಡ್ ಬಾಲ್: ಪುರುಷರ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ತಂಡವು ಮೈಸೂರು ತಂಡವನ್ನು 40–32 ಪಾಯಿಂಟ್‌ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿತು. ಬೆಂಗಳೂರು ನಗರ ಹಾಗೂ ಉಜಿರೆಯ ಎಸ್‌ಡಿಎಂ ತಂಡಗಳು ಕಂಚಿನ ಪದಕ ಗೆದ್ದವು.
ಮಹಿಳೆಯರ ವಿಭಾಗದ ರೋಚಕ ಫೈನಲ್‌ನಲ್ಲಿ ಹಾಸನ ತಂಡವು ದಾವಣಗೆರೆ ತಂಡವನ್ನು 14–13 ಪಾಯಿಂಟ್‌ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಚಿತ್ರದುರ್ಗ ಹಾಗೂ ಬೆಂಗಳೂರು ನಗರ ತಂಡಗಳು ಕಂಚಿನ ಪದಕ ಗೆದ್ದುಕೊಂಡವು.
ವಾಲಿಬಾಲ್: ಪುರುಷರ ವಾಲಿಬಾಲ್‌ನಲ್ಲಿ ಬೆಂಗಳೂರು ಎ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಉಡುಪಿ ತಂಡಗಳು ಪ್ರಶಸ್ತಿ ಗೆದ್ದವು. ಪುರುಷರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು ಎ ತಂಡವು ಉಡುಪಿ ತಂಡವನ್ನು ಸೋಲಿಸಿತು. ಬೆಳಗಾವಿ ತಂಡ ಕಂಚಿನ ಪದಕ ಗೆದ್ದುಕೊಂಡಿತು.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಉಡುಪಿ ತಂಡವು ಮೈಸೂರು ತಂಡವನ್ನು ಸೋಲಿಸಿತು. ಕೊಪ್ಪಳ ತಂಡವು ಕಂಚಿನ ಪದಕ ಗೆದ್ದುಕೊಂಡಿತು.
ಬ್ಯಾಸ್ಕೆಟ್‌ಬಾಲ್ ನಲ್ಲಿ ಪುರುಷರ ವಿಭಾಗದ ಫೈನಲ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡವು ಡೈಸ್ ಬೆಂಗಳೂರು ತಂಡವನ್ನು ಸೋಲಿಸಿ ಚಿನ್ನ ಗೆದ್ದಿತು. ದಕ್ಷಿಣ ಕನ್ನಡ ತಂಡವು ಕಂಚಿನ ಪದಕ ಗೆದ್ದಿತು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಮೌಂಟ್ಸ್ ತಂಡವು ಚಿನ್ನ, ಡೈಸ್ ಮೈಸೂರು ಬೆಳ್ಳಿ ಹಾಗೂ ಡೈಸ್ ಮಂಡ್ಯ ತಂಡ ಕಂಚಿನ ಪದಕ ಗೆದ್ದಿತು.
ಪುರುಷರ ಹಾಕಿ: ಹಾಕಿ ಪೈನಲ್ ಪಂದ್ಯದಲ್ಲಿ ಹಾವೇರಿ ತಂಡವು 1–0 ಅಂತರದಲ್ಲಿ ಹಾಸನ ತಂಡವನ್ನು ಮಣಿಸಿ ಚಿನ್ನ ಗೆದ್ದಿತು.
ಅಥ್ಲೆಟಿಕ್ಸ್
ಪುರುಷರು: 5 ಸಾವಿರ ಮೀ. ಓಟ: ಸಂದೀಪ್ (ಬೆಂಗಳೂರು)–1,ಕಾಲ: 15ನಿ.7 ಸೆ., ವೈಭವ ಪಾಟೀಲ (ಬೆಳಗಾವಿ) –2, ಗುರುಪ್ರಸಾದ್ (ಬೆಂಗಳೂರು)–3; ಹೈಜಂಪ್:ಸಿನಾನ್ (ಉಡುಪಿ)–1. ಎತ್ತರ: 1.85 ಮೀ., ಭವಿತ್ ಕುಮಾರ್ (ಉಡುಪಿ)–2, ಯಶ್ವಿನ್ (ದಕ್ಷಿಣ ಕನ್ನಡ)–3; 100 ಮೀ.ಓಟ: ಗಗನ್ ಗೌಡ (ಬೆಂಗಳೂರು)–1. ಕಾಲ: 10ನಿ.63 ಸೆ., ರವಿ ಕಿರಣ್ (ಚಾಮರಾಜ ನಗರ)–2, ಸುಜನ್ ಥಾಮಸ್ (ದಕ್ಷಿಣ ಕನ್ನಡ)–3; 400 ಮೀ. ಹರ್ಡಲ್ಸ್: ಭೂಷನ್ ಪಾಟೀಲ್ (ಬೆಳಗಾವಿ)–1. ಕಾಲ: 53 ನಿ. 81 ಸೆ., ರಾಹುಲ್ ನಾಯಕ (ಮೈಸೂರು)–2, ಭಾಗ್ಯವಂತ (ಕಲಬುರ್ಗಿ)–3; ಶಾಟ್ ಪಟ್: ಪ್ರಜ್ವಲ್ ಶೆಟ್ಟಿ (ಉಡುಪಿ)–1, ಮೊಹಮ್ಮದ್ ಸಕ್ಲೈನ್ ಅಹಮ್ಮದ್ (ಮೈಸೂರು)–2, ಮನುಷ್ (ಮೈಸೂರು)–3;
ಮಹಿಳೆಯರು: 5 ಸಾವಿರ ಮೀ. ಓಟ: ತೇಜಸ್ವಿನಿ (ಕೊಡಗು)–1. ಕಾಲ 19 ನಿ. 27.20 ಸೆ., ಪ್ರಣಮ್ಯ (ದಕ್ಷಿಣ ಕನ್ನಡ)–2, ಶುಭಾಂಗಿ (ಬೆಳಗಾವಿ)–3; 100 ಮೀ ಓಟ: ನಿಯೋಲ್ ಅನ್ನಾ ಕಾರ್ನೆಲಿಯೊ (ಬೆಂಗಳೂರು)–1. ಕಾಲ: 11 ನಿ.93 ಸೆ., ಶ್ರುತಿ ಶೆಟ್ಟಿ (ಉಡುಪಿ)–2, ವರ್ಷಾ ವಿ. (ಬೆಂಗಳೂರು)–3; ಹೈ ಜಂಪ್: ಪಲ್ಲವಿ ಪಾಟೀಲ (ಯಾದಗಿರಿ)–1. ಎತ್ತರ 1.76 ಮೀ., ಸುಪ್ರಿಯಾ (ಚಿಕ್ಕಮಗಳೂರು)–2, ಫ್ಲಾರ್ವಿಶಾ ವೆಲಿಶಾ ಮೊಂತೆರೊ (ದಕ್ಷಿಣ ಕನ್ನಡ)–2; 400 ಮೀ. ಹರ್ಡಲ್ಸ್: ದೀಕ್ಷಿತಾ (ದಕ್ಷಿಣ ಕನ್ನಡ)–1. ಕಾಲ: 1ನಿ.03.1 ಸೆ., ಅಪೂರ್ವ ನಾಯ್ಕ್ (ಬೆಳಗಾವಿ)–2, ಅರ್ನಿಕಾ ವರ್ಷಾ ಡಿಸೋಜ (ಉಡುಪಿ)–3.
'ಮಂಗಳೂರು ಉಡುಪಿ ಕ್ರೀಡಾಂಗಣಗಳಿಗೆ ₹3 ಕೋಟಿ'
ಮಂಗಳೂರಿನ ಮಂಗಳಾ ಕ್ರೀಡಾಂಗಣ ಮತ್ತು ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ₹3 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದರು. ಉಡುಪಿಯ ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವಿದೆ. ಆ ಕಾರಣಕ್ಕೆ ಈ ಬಾರಿ ಕ್ರೀಡಾಕೂಟವನ್ನು ಇಲ್ಲಿ ನಡೆಸಲಾಗಿದೆ ಎಂದು ಹೇಳಿದ ಅವರು ಮುಂದಿನ ಕರ್ನಾಟಕ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಬೇಕು ಅಲ್ಲಿ ಸುಸಜ್ಜಿತವಾದ ಕ್ರೀಡಾಂಗಣವಿದೆ ಎಂದು ವೇದಿಕೆಯಲ್ಲಿದ್ದ ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್ ಅವರಿಗೆ ಹೇಳಿದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಯಶ್‌ಪಾಲ್ ಸುವರ್ಣ ಗುರ್ಮೆ ಸುರೇಶ್ ಶೆಟ್ಡಿ ಗುರುರಾಜ್ ಗಂಟಿಹೊಳೆ ಕಿರಣ್‌ಕುಮಾರ್ ಕೋಡ್ಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅಭಯಚಂದ್ರ ಜೈನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.