ADVERTISEMENT

ಜಿಲ್ಲೆಯೆಲ್ಲಡೆ ಸಂಭ್ರಮದ ಬಕ್ರೀದ್‌: ಮಸೀದಿಗೆ ತೆರಳಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 4:33 IST
Last Updated 8 ಜೂನ್ 2025, 4:33 IST
ಉಡುಪಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಬಕ್ರೀದ್‌ ಆಚರಿಸಲಾಯಿತು
ಉಡುಪಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಬಕ್ರೀದ್‌ ಆಚರಿಸಲಾಯಿತು   

ಉಡುಪಿ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಸಡಗರ, ಸಂಭ್ರಮದಿಂದ ಸೋಮವಾರ ಆಚರಿಸಿದರು.

ಹೊಸ ಬಟ್ಟೆ ಧರಿಸಿ ಬೆಳಿಗ್ಗೆ ಮಸೀದಿಗೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ಕೋರಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಉಡುಪಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಹಬ್ಬವನ್ನು ಆಚರಿಸಲಾಯಿತು. ಪ್ರಾರ್ಥನೆಯ ನೇತೃತ್ವವನ್ನು ಮೌಲಾನಾ ಒಬೈದುರ್ ರೆಹಮಾನ್ ನದ್ವಿ ವಹಿಸಿದ್ದರು. ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಸಾಮರಸ್ಯದ ಮಹತ್ವವನ್ನು ಅವರು ಒತ್ತಿ ಹೇಳಿದರು.

ADVERTISEMENT

ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.

ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಖುತ್ಬಾ ಪಾರಾಯಣ ನಡೆಯಿತು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಬೈಂದೂರು ವರದಿ: ಬೈಂದೂರು, ನಾಗೂರು, ನಾವುಂದ, ಶಿರೂರು ಮುಂತಾದ ಕಡೆಗಳಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿರು ಸಡಗರದಿಂದ ಆಚರಿಸಿದರು.

ಹಬ್ಬದ ಪ್ರಯುಕ್ತ ಮುಂಜಾನೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ, ಜಾಮೀಯಾ ಮಸೀದಿ, ಹಡವಿನಕೋಣೆ ಅಬ್ದುಲ್ ತಲಾಹಿ ಜಾಮೀಯಾ ಮಸೀದಿ, ಬೈಂದೂರಿನ ಜಾಮೀಯಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಕಾಪು ವರದಿ: ತಾಲ್ಲೂಕಿನಾದ್ಯಂತ ‘ಈದುಲ್ ಅಝಾ’ (ಬಕ್ರೀದ್)ವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾಪು, ಪಡುಬಿದ್ರಿ, ಶಿರ್ವ, ಕಟಪಾಡಿ ಭಾಗದಲ್ಲಿ ಬೆಳಿಗ್ಗೆ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಬೈಂದೂರು ವ್ಯಾಪ್ತಿಯ ಹಡವಿನಕೋಣೆ ಜಾಮೀಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.