ADVERTISEMENT

ಸುವರ್ಣ ತೊಟ್ಟಿಲಲ್ಲಿ ಕಂಗೊಳಿಸಿದ ಬಾಲಕೃಷ್ಣ

ಕಡೆಗೋಲು ಕೃಷ್ಣನಿಗೆ ಪಲಿಮಾರು ಶ್ರೀಗಳಿಂದ ಮಹಾಪೂಜೆ: ಕೃಷ್ಣನೂರಿಗೆ ಹರಿದುಬಂದ ಭಕ್ತಸಾಗರ, ರಥಬೀದಿಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 8:39 IST
Last Updated 22 ಆಗಸ್ಟ್ 2019, 8:39 IST
ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು
ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು   

ಉಡುಪಿ: ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮುಗಿಲುಮುಟ್ಟಿದೆ. ಕಡೆಗೋಲು ಕೃಷ್ಣನ ದರ್ಶನ ಪಡೆಯಲು ದೇಶ–ವಿದೇಶಗಳಿಂದ ಸಾವಿರಾರು ಭಕ್ತರು ಉಡುಪಿಗೆ ಹರಿದು ಬರುತ್ತಿದ್ದಾರೆ. ಶ್ರೀಕೃಷ್ಣಮಠ ಭಕ್ತರಿಂದ ತುಂಬಿಹೋಗಿದೆ. ಅಷ್ಟಮಿಯ ದಿನವಾದ ಭಾನುವಾರ ಪೊಡವಿಗೊಡೆಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಲಕ್ಷಾರ್ಚನೆ: ಬೆಳಿಗ್ಗೆ 6ಕ್ಕೆ ಶ್ರೀಕೃಷ್ಣನಿಗೆ ಲಕ್ಷಾರ್ಚನೆ ನೆರವೇರಿಸಲಾಯಿತು. ವೇದಮಂತ್ರ ಘೋಷಗಳೊಂದಿಗೆ ಕೃಷ್ಣನ ಸ್ಮರಣೆ ನಡೆಯಿತು. ಬೆಳಿಗ್ಗೆ 9ಕ್ಕೆ ಮಹಾಪೂಜೆ ನಡೆಯಿತು. ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥರು ಸುವರ್ಣ ತೊಟ್ಟಿಲಿನಲ್ಲಿ ಬಾಲಕೃಷ್ಣನ ಕೂರಿಸಿ ವಿಶೇಷ ಅಲಂಕಾರವನ್ನು ಮಾಡಿದರು.

ಚಿನ್ನದ ತೊಟ್ಟಿಲಿನಲ್ಲಿ ವಿರಾಜಮಾನನಾಗಿದ್ದ ಗೋಪಾಲನಿಗೆ ಪಲಿಮಾರು ವಿದ್ಯಾಧೀಶ ತೀರ್ಥರು ಮಂಗಳಾರತಿ ಸಮರ್ಪಿಸಿದರು. ಬಳಿಕ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆಯನ್ನು ನೆರವೇರಿಸಿದರು.

ADVERTISEMENT

ಬೆಳಿಗ್ಗೆ 10 ಗಂಟೆಗೆ ಲಡ್ಡಿಗೆ ಮುಹೂರ್ತ ನಡೆಯಿತು. ಕೃಷ್ಣಮಠದ ಪಾಕಶಾಲೆಯಲ್ಲಿದೇವರ ವಿಶೇಷ ಪೂಜೆಗಾಗಿ ಲಡ್ಡಿಗೆಯನ್ನು ತಯಾರಿಸುವ ಕಾರ್ಯಕ್ಕೆ ಪಲಿಮಾರು ಶ್ರೀಗಳು ಹಾಗೂ ಅದಮಾರು ಕಿರಿಯ ಮಠಾಧೀಶರು ಚಾಲನೆ ನೀಡಿದರು. ಉಭಯದ್ವಯರು ಸ್ವತಃ ಲಡ್ಡು ತಯಾರಿಸಿದರು. ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ಲಡ್ಡುಗಳನ್ನು ತಯಾರಿಸಲಾಯಿತು.

ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಭಜನಾ ಕಾರ್ಯಕ್ರಮಕ್ಕೆ ವಿದ್ಯಾಧೀಶ ತೀರ್ಥರು ಚಾಲನೆ ನೀಡಿದರು. ವಿವಿಧ ಭಜನಾ ಮಂಡಳಿಗಳಿಂದ ಸಂಜೆಯವರೆಗೂ ಭಜನೆ ನಡೆಯಿತು.

ಬಳಿಕ ಮಠದ ಮುಂಭಾಗ ಬನ್ನಂಜೆ ಬಳಗದ ಹುಲಿವೇಷ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಹುಲಿವೇಷಧಾರಿಗಳು ಪ್ರದರ್ಶನ ಗಮನ ಸೆಳೆಯಿತು. ಪ್ರದರ್ಶನ ವೀಕ್ಷಿಸಿದ ಪಲಿಮಾರು ಶ್ರೀಗಳು ನಗದು ಪುರಸ್ಕಾರ ನೀಡಿ ಶುಭ ಹಾರೈಸಿದರು.

ಹರಿದುಬಂದ ಭಕ್ತಸಾಗರ

ದೂರದೂರುಗಳಿಂದ ಸಾವಿರಾರು ಭಕ್ತರು ಶ್ರೀಕೃಷ್ಣನ ದರ್ಶನಕ್ಕೆ ಕೃಷ್ಣಮಠಕ್ಕೆ ಆಗಮಿಸುತ್ತಿದ್ದಾರೆ. ರಾಜಾಂಗಣದ ಎದುರಿನ ಪಾರ್ಕಿಂಗ್ ಪ್ರವಾಸಿಗರ ವಾಹನಗಳಿಂದ ಭರ್ತಿಯಾಗಿತ್ತು. ದರ್ಶನದ ಸಾಲು ಉದ್ದವಾಗಿತ್ತು. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಭಕ್ತರು ಕೃಷ್ಣನ ದರ್ಶನ ಪಡೆದರು. ವಿಶೇಷ ದರ್ಶನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ರಥಬೀದಿಯಲ್ಲಿ ಭಕ್ತಸಾಗರ: ರಥಬೀದಿಯ ತುಂಬೆಲ್ಲ ಭಕ್ತರ ಕಲರವ ತುಂಬಿದ್ದು, ಜಾತ್ರೆಯಂತೆ ಭಾಸವಾಗುತ್ತಿದೆ. ಹೂ, ಹಣ್ಣು, ಸಿಹಿ ತಿನಿಸು, ಪೂಜಾ ಸಾಮಾಗ್ರಿ, ಬಟ್ಟೆ ವ್ಯಾಪಾರಿಗಳ ಗದ್ದಲ ಜೋರಾಗಿದೆ. ಕೃಷ್ಣನ ದರ್ಶನ ಪಡೆದ ಭಕ್ತರು ರಥಬೀದಿಯನ್ನು ಸುತ್ತುಹಾಕಿ ಸಂಭ್ರಮ ಪಡುತ್ತಿದ್ದ ದೃಶ್ಯ ಕಂಡುಬಂತು. ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟಮಿಯ ಪ್ರಸಾದ ವಿತರಿಸಲಾಯಿತು.

ಭರ್ತಿಯಾದ ಪ್ರವಾಸಿ ಮಂದಿರಗಳು:ಸೋಮವಾರ ವಿಟ್ಲಪಿಂಡಿ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಡುಪಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತಲೂ ಇರುವ ಲಾಡ್ಜ್‌ಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.