ADVERTISEMENT

ಬ್ರಹ್ಮಾವರ: ನಿರ್ಲಕ್ಷ್ಯಕ್ಕೆ ಒಳಗಾದ ತುಳುನಾಡ ರಾಜಧಾನಿ

ಅಗಸ್ಟ್‌ ಮೂರನೇ ವಾರ ಇತಿಹಾಸ ಉಳಿಸಿ ಸಪ್ತಾಹ

ಶೇಷಗಿರಿ ಭಟ್ಟ
Published 20 ಆಗಸ್ಟ್ 2025, 3:08 IST
Last Updated 20 ಆಗಸ್ಟ್ 2025, 3:08 IST
ಪಾಳು ಬಿದ್ದ ಶಾಸನಗಳು, ಕಲ್ಲು ವಿಗ್ರಹಗಳು
ಪಾಳು ಬಿದ್ದ ಶಾಸನಗಳು, ಕಲ್ಲು ವಿಗ್ರಹಗಳು   

ಬ್ರಹ್ಮಾವರ: ಕರ್ನಾಟಕ ಇತಿಹಾಸ ಅಕಾಡೆಮಿಯಿಂದ ಪ್ರತಿ ವರ್ಷ ಆಗಸ್ಟ್‌ನಲ್ಲಿ ಐತಿಹಾಸಿಕ ಪರಂಪರೆ ಸಂರಕ್ಷಿಸುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಇತಿಹಾಸ ಉಳಿಸಿ ಸಪ್ತಾಹ ಅಭಿಯಾನ ನಡೆಸಲಾಗುತ್ತದೆ. ಆದರೆ ಕರಾವಳಿಯ ಇತಿಹಾಸದಲ್ಲಿ ತುಳುನಾಡಿನ ರಾಜಧಾನಿಯೆಂದೇ ಪ್ರಸಿದ್ಧವಾಗಿ ಸಂಶೋಧನಾ ಕೇಂದ್ರವಾಗಿರುವ ಬಾರ್ಕೂರು ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.

ಅಭಿಯಾನವು ರಾಜ್ಯದಾದ್ಯಂತ ಐತಿಹಾಸಿಕ ಸ್ಥಳಗಳನ್ನು ರಕ್ಷಿಸಲು, ಅವುಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಿಸುತ್ತದೆ. ನಿರ್ಲಕ್ಷಿತ ದೇವಾಲಯಗಳು, ಶಾಸನಗಳು, ಹಸ್ತಪ್ರತಿಗಳು, ಪುರಾತನ ದಾಖಲೆಗಳನ್ನು ರಕ್ಷಿಸಲು, ಅವುಗಳ ಮಹತ್ವವನ್ನು ಸ್ಥಳೀಯ ಜನರಿಗೆ ತಿಳಿಸಲು ಶ್ರಮಿಸಲಾಗುತ್ತದೆ. ಶಾಲೆಗಳಿಗೆ, ಸಾರ್ವಜನಿಕರಿಗೆ ವಿತರಿಸಲು ಪ್ರತಿವರ್ಷ ಪೋಸ್ಟರ್‌ ಬಿಡುಗಡೆ ಮಾಡಲಾಗುತ್ತದೆ. ಆದರೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ಬಗ್ಗೆ ಇವೆಲ್ಲವನ್ನೂ ಕಡೆಗಣಿಸಲಾಗಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ಇತಿಹಾಸ ಅಕಾಡೆಮಿ, ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶನಾಲಯದ ಸಹಯೋಗದೊಂದಿಗೆ ನಡೆಯುವ ಈ ಅಭಿಯಾನದಲ್ಲಿ ಐತಿಹಾಸಿಕ ಸ್ಥಳಗಳ ಸಂರಕ್ಷಣೆ, ಇತಿಹಾಸ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವುದು, ವಿದ್ಯಾರ್ಥಿಗಳಿಗೆ ಇತಿಹಾಸದ ಶಿಕ್ಷಣ ನೀಡುವುದು, ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು ಪ್ರೋತ್ಸಾಹಿಸುವುದು, ಐತಿಹಾಸಿಕ ಸಂಶೋಧನೆಗಳನ್ನು ಉತ್ತೇಜಿಸುವುದು, ಹೊಸ ವಿಷಯಗಳನ್ನು ಕಂಡುಹಿಡಿಯುವ ಉದ್ದೇಶವಿದೆ. ಆದರೆ ಬಾರ್ಕೂರಿನ ಬಗ್ಗೆ ಹೇಳುವುದಾದರೆ ಇದು ಯಾವೂದು ನಡೆಯುತ್ತಿಲ್ಲ ಎನ್ನುವುದು ಬೇಸರ ಸಂಗತಿ.

ADVERTISEMENT

ತುಳುನಾಡಿನ ರಾಜಧಾನಿ ಬಾರ್ಕೂರು:

ಉಡುಪಿ ಜಿಲ್ಲೆಯ ಬಾರ್ಕೂರು ಒಂದು ಕಾಲದಲ್ಲಿ ತುಳುನಾಡಿನ ಐತಿಹಾಸಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದ ನಗರ. ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಕಳೆಗುಂದಿದೆ. ಇಲ್ಲಿನ ಅಪೂರ್ವ ಶಿಲಾಕೃತಿಗಳು ಯಾರದ್ದೋ ಮನೆಯ ತಳಪಾಯ ಸೇರಿದೆ. ಭಾಷೆ, ಸಂಸ್ಕೃತಿ, ಜನಜೀವನದ ಅಧ್ಯಯನದ ದೃಷ್ಟಿಯಿಂದ ಅಮೂಲ್ಯ ಎನಿಸುವ ಶಿಲಾ ಶಾಸನಗಳು ಅಲ್ಲಲ್ಲಿ ಬಿದ್ದು ಹಾಳಾಗಿ ಹೋಗುತ್ತಿವೆ.

ರಾಜ ವೈಭವದ ಆಡಂಬೋಲಗಳಿಗೆ ಸಾಕ್ಷಿಯಾಗಿದ್ದ ಪುರಾತನ ದೇವಾಲಯಗಳು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ಮೂರು ಹೊತ್ತು ಪೂಜೆ ಮಾಡಲು ಅರ್ಚಕರಲ್ಲೂ ದುಡ್ಡಿಲ್ಲ. ವರ್ಷಕ್ಕೊಮ್ಮೆ ದೇವಾಲಯದ ಹುಂಡಿ ಬರಿದು ಮಾಡುವ ಸರ್ಕಾರಕ್ಕೆ ಇಲ್ಲಿನ ದೇವಾಲಯಗಳ ದುಃಸ್ಥಿತಿ ಕಾಣುವುದಿಲ್ಲ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರಿನಂತಹ ಶ್ರೀಮಂತ ದೇವಾಲಯಗಳ ಆದಾಯ ಎಣಿಸುವ ಸರ್ಕಾರ, ಬಾರ್ಕೂರಿನ ಪುರಾತನ ದೇವಾಲಯಗಳ ಬಗ್ಗೆ ಮೌನ ವಹಿಸಿದೆ.

ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರವಾಸೋದ್ಯಮ ಇಲಾಖೆಗೆ ಬಾರ್ಕೂರು ಐತಿಹಾಸಿಕ ನಗರಿಯಲ್ಲಿ ಇರುವ ಅವಕಾಶಗಳು ಕಾಣುತ್ತಿಲ್ಲ. ಇದರ ಜೊತೆಗೆ ಪುರಾತತ್ವ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು ಬಾರ್ಕೂರಿನ ಬಗ್ಗೆ ದಿವ್ಯ ಮೌನ!

ತುಳುನಾಡಿನ ರಾಜಧಾನಿಯಾಗಿದ್ದ ಬಾರ್ಕೂರಿನಲ್ಲಿ ಕಲ್ಲುಗಳು ಕತೆ ಹೇಳುತ್ತವೆ ಕೇಳುವವರಿಲ್ಲ. ಇಲ್ಲಿ ಬೇಲಿಗೆ ಇಟ್ಟ ಕಲ್ಲೂ ಇತಿಹಾಸ ಸಾರುತ್ತದೆ. ಮನೆಗಳ ಮೆಟ್ಟಿಲೂ ಚರಿತ್ರೆ ಹೇಳುತ್ತದೆ. ಶಾಸನದ ಕಲ್ಲುಗಳು ಬಟ್ಟೆ ಒಗೆಯುವ ಕಲ್ಲುಗಳಾಗಿವೆ. ಬಾರ್ಕೂರು ಇತಿಹಾಸ ಇಂದು ಬೀದಿ ಪಾಲಾಗಿದೆ. ಅರಮನೆ ನಾಶವಾಗಿದ್ದು, ಅರಮನೆ ಇದ್ದ ಜಾಗ ಪಾಳು ಬಿದ್ದಿದೆ. ಆನೆ, ಕುದುರೆ ಕಟ್ಟಿ ಹಾಕುತ್ತಿದ್ದ ಕಲ್ಲುಗಳು ಈಗ ದನ ಮೇಯಿಸಲು ಕಟ್ಟುವ ಕಲ್ಲುಗಳಾಗಿ ಮಾರ್ಪಾಡಾಗಿವೆ. 365 ದೇವಸ್ಥಾನಗಳಿದ್ದ ಬಾರ್ಕೂರಿನಲ್ಲಿ ಶೇ 75ರಷ್ಟು ನಾಮಾವಶೇಷವಾಗಿವೆ.

ಬಾರ್ಕೂರಿನ ಸಣ್ಣ ಪೇಟೆಯನ್ನು ಬಿಟ್ಟು ಸುತ್ತ ಎತ್ತ ಹೋದರೂ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ಕೆರೆಗಳು, ದೇವಸ್ಥಾನಗಳು, ಬಾವಿಗಳು ಸಿಗುತ್ತವೆ. ಸುತ್ತ ಕೋಟೆ, ಅರಮನೆ ಇದ್ದ ಜಾಗ ಇವತ್ತಿಗೂ ಇದೆ. ಸುಮಾರು 25 ಎಕ್ರೆ ಸ್ಥಳದ ಸುತ್ತ ಆಳವಾದ ಕಂದಕ ಸೃಷ್ಟಿಸಿ ಕೋಟೆ ನಿರ್ಮಿಸಿರುವುದನ್ನು ಇಂದಿಗೂ ಕಾಣಬಹುದು. ಅರಮನೆ ನೆಲಸಮವಾಗಿದ್ದರೂ ಕುದುರೆ, ಆನೆ ಕಟ್ಟುತ್ತಿದ್ದ ಲಾಯದ ಕಲ್ಲುಗಳು ಉಳಿದಿವೆ. ಸುತ್ತ ಹುಲ್ಲ ಬೆಳೆದಿರುವುದರಿಂದ ಆ ಕಲ್ಲು ದನಗಳನ್ನು ಕಟ್ಟಲು ಉಪಯೋಗವಾಗುತ್ತಿದೆ. ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಲಾದ ಬಾವಿಯಲ್ಲಿ ಈಗಲೂ ನೀರಿದೆ. 6 ವರ್ಷದ ಹಿಂದೆ ಇಲ್ಲಿ ಉತ್ಖನನ ಮಾಡಿದಾಗ ಅರಮನೆಯ ಅಡಿಪಾಯ ಗುರುತಿಸಲು ಸಾಧ್ಯವಾಗಿದೆ.

ಹೊಯ್ಸಳರ ನಂಟನ್ನು ಹೊಂದಿರುವ ಕತ್ತಲೆ ಬಸದಿ, ಚಾಲುಕ್ಯ ಶೈಲಿಯಲ್ಲಿರುವ ಸೋಮನಾಥೇಶ್ವರ ದೇವಾಲಯ, 24 ತೀರ್ಥಂಕರರ ಕಲ್ಲು, ಸಿಂಹಾಸನಗುಡ್ಡೆ, ಬೇತಾಳೇಶ್ವರ ದೇವಸ್ಥಾನ, ತ್ರಿವಿಕ್ರಮನ ಸಿಂಹಾಸನ ಇವೆಲ್ಲವೂ ಇಂದು ಗತಕಾಲದ ನೆನಪನ್ನು ಸಾರುತ್ತಿವೆಯಾದರೂ, ಅದರ ಅಭಿವೃದ್ಧಿ, ಸಂರಕ್ಷಣೆಗೆ ಸರ್ಕಾರ ಮುಂದೆ ಬಾರದಿರುವುದು ದುರದೃಷ್ಟಕರ.

ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರ್ಕೂರು ಆಗಿತ್ತು. 365 ದೇವಸ್ಥಾನಗಳು, ಪ್ರತಿ ದಿನ ಜಾತ್ರೆ, ರಾಜಪರಿವಾರ ದಿನಕ್ಕೊಂದು ಜಾತ್ರೆಯಲ್ಲಿ ಭಾಗವಹಿಸುವಿಕೆ ಎಂದೆಲ್ಲ ಹೇಳುವ ಇಲ್ಲಿಯ ಇತಿಹಾಸದ ಬಗ್ಗೆ ಹೇಳಲಾಗುತ್ತಿದ್ದರೂ, ಹಂಪೆ, ಬೇಲೂರು, ಹಳೆಬೀಡಿನಂತಹ ಐತಿಹಾಸಿಕ ಪ್ರದೇಶಗಳಿಗೆ ನೀಡಿದ ಪ್ರಾಮುಖ್ಯತೆ ಬಾರ್ಕೂರಿಗೆ ನೀಡುತ್ತಿಲ್ಲ ಎನ್ನುವುದು ಇಲ್ಲಿಯ ಇತಿಹಾಸ ಪ್ರಿಯರ ಪ್ರಶ್ನೆ.

ಗತಕಾಲದ ವೈಭವವನ್ನು ಬಾರ್ಕೂರು ಮತ್ತೆ ಕಾಣುವಂತಾಗಲಿ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ವಸ್ತು ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇತಿಹಾಸ ಅಕಾಡೆಮಿ ಕಾರ್ಯ ಪ್ರವೃತ್ತವಾಗಲಿ ಎನ್ನುವುದು ಬಾರ್ಕೂರು ಜನರು, ಜಿಲ್ಲೆಯ ಇತಿಹಾಸ ಪ್ರಿಯರ ಆಶಯ.

ಇತಿಹಾಸ ಪ್ರಸಿದ್ದ ಬಾರ್ಕೂರಿನ ಕತ್ತಲೆ ಬಸದಿ
ಬಾರ್ಕೂರಿನ ಪಂಚಲಿಂಗೇಶ್ವರ ದೇವಸ್ಥಾನ
ಪಾಳು ಬಿದ್ದ ಶಾಸನಗಳು ಕಲ್ಲು ವಿಗ್ರಹಗಳು

ಬಾರ್ಕೂರಿನಲ್ಲಿ 2019ರ ಜನವರಿ 25ರಿಂದ 27ರವರೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾಡಳಿತ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅದ್ದೂರಿಯಾಗಿ ಆಳುಪೋತ್ಸವ ನಡೆದಿತ್ತು. ಕೋಟೆಯ ಸುತ್ತಲಿನ ಏರುಪೇರು ಸಮತಟ್ಟು ಮಾಡಿ ಭೂತಾಳಪಾಂಡ್ಯ ವೇದಿಕೆಯಲ್ಲಿ ರಾಷ್ಟ್ರಮಟ್ಟದ ನಾಯಕರು ಕಲಾವಿದರನ್ನು ಸೇರಿಸಿ ಆಳುಪೋತ್ಸವ ವೈಭವದಿಂದ ನಡೆಸಲಾಗಿತ್ತು. ಅದನ್ನು ಪ್ರತಿ 2 ವರ್ಷಕೊಮ್ಮೆ ನಡೆಸಿ ಬಾರ್ಕೂರನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಲಾಗಿತ್ತು. ಆದರೆ ಇಂದು ಯಾರೂ ಈ ಬಗ್ಗೆ ಗಮನ ಹರಿಸದೆ ಇರುವು‌ದರಿಂದ ಮುಳ್ಳು ಪೊದೆಗಳು ಬೆಳೆದು ಹಾವುಗಳಿಗೆ ಆವಾಸವಾಗಿದೆ. ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ. ರಾಣಿಯ ಸ್ನಾನದ ಸರೋವರ ಆನೆ ಕುದುರೆ ಕಟ್ಟುವಲ್ಲೆಲ್ಲ ಮರಗಿಡಗಳು ಬೆಳೆದು ಗುರುತು ಸಿಗದ ಸ್ಥಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.