ADVERTISEMENT

ಹಡಿಲು ಭೂಮಿಯಲ್ಲಿ ಹಸಿರು ಹಾಸು: ಹೋಟೆಲ್ ಉದ್ಯಮಿಯ ಕೃಷಿ ಕಾಯಕ

ಲಾಕ್‍ಡೌನ್ ಅವಧಿಯಲ್ಲಿ ಕೃಷಿ

ಪ್ರಕಾಶ ಸುವರ್ಣ ಕಟಪಾಡಿ
Published 1 ಜೂನ್ 2021, 2:22 IST
Last Updated 1 ಜೂನ್ 2021, 2:22 IST
ಸಂತೋಷ್ ಪಂಜಿಮಾರ್ ಅಡಿಕೆ ಸಸಿ ನಾಟಿ ಮಾಡಿರುವುದು
ಸಂತೋಷ್ ಪಂಜಿಮಾರ್ ಅಡಿಕೆ ಸಸಿ ನಾಟಿ ಮಾಡಿರುವುದು   

ಶಿರ್ವ: ಲಾಕ್‍ಡೌನ್ ಅವಧಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಹೋಟೆಲ್ ಉದ್ಯಮಿ, ಈ ಅವಧಿಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಅಡಿಕೆ ಕೃಷಿಯನ್ನು ನೆಚ್ಚಿಕೊಂಡಿರುವ ಶಿರ್ವ ಸಮೀಪದ ಪಂಜಿಮಾರ್ ಗ್ರಾಮದ ಯುವಕ ಸಂತೋಷ್ ಶೆಟ್ಟಿ ಪಂಜಿಮಾರ್ ಇತರರಿಗೆ ಮಾದರಿ ಆಗಿದ್ದಾರೆ.

ಹಡಿಲುಬಿಟ್ಟ ಕೃಷಿಭೂಮಿಗೆ ಇಳಿದ ಸಂತೋಷ್ ಶೆಟ್ಟಿ ಅವರು, ಕಳೆದ ವರ್ಷ ಲಾಕ್‍ಡೌನ್‍ ವೇಳೆ ಉದ್ಯಮಕ್ಕೆ ಹೊಡೆತ ಬಿದ್ದಾಗ, ಹಡಿಲು ಬಿಟ್ಟಿದ್ದ ಕೃಷಿ ಭೂಮಿಯ 3–4 ಎಕರೆಯಲ್ಲಿ 300 ಅಡಿಕೆ ಸಸಿ ನಾಟಿ ಮಾಡಿದರು. ಈ ಬಾರಿ ಮತ್ತೆ 350 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಹಡಿಲು ಬಿದ್ದಿದ್ದ ಭೂಮಿಯಲ್ಲಿ ಈಗ ಜೀವಕಳೆ ತುಂಬಿದೆ.

ಉಡುಪಿ ಮತ್ತು ಕಾಪುವಿನ ಕೃಷಿ ಇಲಾಖೆಯಿಂದ ಕಳೆದ ವರ್ಷ ತಂದು ನೆಟ್ಟಿರುವ ಮಂಗಳಾ ಅಡಿಕೆ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಮುಂಬೈಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದವರು, ಊರಿಗೆ ಬಂದು ಸಮಾಜ ಸೇವೆಯಲ್ಲಿ ತೊಡಗಿದ್ದರು.

ADVERTISEMENT

ಅಡಿಕೆ ಮಾತ್ರವಲ್ಲದೆ, ಕುಟುಂಬದ ಹಿರಿಯರು ಮಾಡುತ್ತಿದ್ದ ಭತ್ತದ ಕೃಷಿಯನ್ನು ಸಹ ಈ ವರ್ಷದಿಂದ ಆರಂಭಿಸಿದ್ದಾರೆ. ‘ನಮ್ಮ ಮನೆತನದ ಕೃಷಿ ಗದ್ದೆಗಳನ್ನು ಮರೆತು, ಬೇರೆ ಉದ್ಯಮಕ್ಕಾಗಿ ಊರೂರು ಅಲೆಯುವುದನ್ನು ಬಿಡಬೇಕು’ ಎನ್ನುತ್ತಾರೆ ಸಂತೋಷ್ ಶೆಟ್ಟಿ.

‘ಕರಾವಳಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಹಡಿಲು ಬಿದ್ದುಕೊಂಡಿದ್ದು, ಯುವಜನತೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಜಿಲ್ಲೆಗೆ ಬೇಕಾಗುವ ಆಹಾರ ದವಸ–ಧಾನ್ಯಗಳನ್ನು ನಾವೇ ಉತ್ಪಾದಿಸಿಕೊಳ್ಳಬಹುದು. ಮುಂಬೈ, ಬೆಂಗಳೂರು ಇನ್ನಿತರ ನಗರಗಳಲ್ಲಿ ಉದ್ಯಮಗಳನ್ನು ಮಾಡಿ ಕೈ ಸುಟ್ಟುಕೊಳ್ಳುವುದಕ್ಕಿಂತ ನಮ್ಮ ಹಿರಿಯರು ಮಾಡಿಟ್ಟಿರುವ ಗದ್ದೆಗಳಲ್ಲಿ ಮಾಡುವ ಖುಷಿಯೇ ಬೇರೆ’ ಎನ್ನುತ್ತಾರೆ ಅವರು.

‘ಕೃಷಿ ಕಾಯಕ ಖುಷಿಕೊಟ್ಟಿದೆ’

‘ಕೋವಿಡ್‌ನಿಂದ ಅನೇಕ ಹೋಟೆಲ್ ಉದ್ಯಮಿ ಹಾಗೂ ಇನ್ನಿತರ ಉದ್ಯಮಿಗಳು ನಷ್ಟಕ್ಕೊಳಗಾಗಿ, ಸಾಲದಲ್ಲಿ ಮುಳುಗಿದ್ದಾರೆ. ಧೃತಿಗೆಡದೆ, ಕೃಷಿಯತ್ತ ಚಿತ್ತ ಹಾಯಿಸಿದಲ್ಲಿ ಉತ್ತಮ ಪ್ರತಿಫಲವನ್ನು ಕಾಣಬಹುದು. ನಾನು ಕೂಡ ಉದ್ಯಮ ತೊರೆದು ಪ್ರಾರಂಭದಲ್ಲಿ ಅಳುಕಿನಿಂದಲೇ ಅಡಿಕೆ ಕೃಷಿ ಆರಂಭಿಸಿದೆ. ಈಗ 650ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಬೆಳೆಸಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಡಿಕೆ ಬೆಳೆಸುವ ಯೋಚನೆ ಇದೆ. ಭತ್ತದ ಕೃಷಿಗೂ ಭೂಮಿ ಉಳುಮೆ ಕಾರ್ಯ ಆರಂಭಿಸಿದ್ದೇನೆ. ಕೃಷಿ ಕಾಯಕ ಖುಷಿಕೊಟ್ಟಿದೆ’ ಎನ್ನುತ್ತಾರೆ ಸಂತೋಷ್ ಶೆಟ್ಟಿ ಪಂಜಿಮಾರ್. (ಅವರ ಸಂಪರ್ಕ ಸಂಖ್ಯೆ: 9900912369).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.