ADVERTISEMENT

ಯತ್ನಾಳಗೆ ಚಿಕಿತ್ಸೆ ಅಗತ್ಯವಿದೆ: ಡಿಕೆಶಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 2:40 IST
Last Updated 8 ಜುಲೈ 2021, 2:40 IST
ಕುಂದಾಪುರ ಸಮೀಪದ ಬೀಜಾಡಿಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಇದ್ದರು
ಕುಂದಾಪುರ ಸಮೀಪದ ಬೀಜಾಡಿಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಇದ್ದರು   

ಕುಂದಾಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ, ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅವರಿಗೆ ಚಿಕಿತ್ಸೆ ಕೊಡಿಸಲು ಯಾಕೆ ಕಾಳಜಿ ವಹಿಸುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

‘ನಾನು ಯಾರ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದೇನೆ ಎಂಬುದನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಬೇಜವಾಬ್ದಾರಿ ಹೇಳಿಕೆ ನೀಡುವ ಯತ್ನಾಳ ಅವರ ವಿರುದ್ಧ ₹ 204 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ಅವರು ಕುಂದಾಪುರ ಸಮೀಪದ ಬೀಜಾಡಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡುತ್ತಾ ಹೇಳಿದರು.

ಆಗಾಗ ನಮ್ಮ ಹೆಸರು ಹೇಳುತ್ತಿದ್ದರೆ ದೊಡ್ಡ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಸಚಿವ ಯೋಗೀಶ್ವರ ಅವರು ಇದ್ದಾರೆ. ಅದಕ್ಕಾಗಿಯೇ ಪದೇಪದೇ ನಮ್ಮ ಹೆಸರನ್ನು ಹೇಳುತ್ತಿರುತ್ತಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದರು.

ADVERTISEMENT

ರಾಜ್ಯಕ್ಕೆ ಬರಬೇಕಾಗಿರುವ ಜಿಎಸ್‌ಟಿ ಬಾಕಿ ಹಣ ತರಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಪ್ರಯತ್ನ ಪಡುತ್ತಿಲ್ಲ. ಅವರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಕರಾವಳಿಯಲ್ಲಿ ಮೀನುಗಾರರು, ಮೂರ್ತೇದಾರರು ಸೇರಿದಂತೆ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಹೋರಾಟ ನಡೆಸುತ್ತದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ರಘುನಂದನ್, ಯು.ಬಿ. ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಸುರೇಂದ್ರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.