ADVERTISEMENT

ಉಡುಪಿ: ಅದಮಾರು ಮಠದ ಭತ್ತ ಮುಹೂರ್ತ ಸಂಭ್ರಮ

ಜ.18ಕ್ಕೆ ಪರ್ಯಾಯ ಮಹೋತ್ಸವ: ಪೂರ್ವಭಾವಿಯಾಗಿ ನೆರವೇರಿದ ಧಾರ್ಮಿಕ ವಿಧಿವಿಧಾನಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 19:30 IST
Last Updated 6 ಡಿಸೆಂಬರ್ 2019, 19:30 IST
ಭತ್ತ ಮುಹೂರ್ತದ ಅಂಗವಾಗಿ ಶುಕ್ರವಾರ ಭತ್ತದ ಮುಡಿಗಳಿಗೆ ಅದಮಾರು ಮಠದ ಹಿತಿಯ ಯತಿ ವಿಶ್ವಪ್ರಿಯ ಶ್ರೀಗಳು ಪೂಜೆ ಸಲ್ಲಿಸಿದರು.
ಭತ್ತ ಮುಹೂರ್ತದ ಅಂಗವಾಗಿ ಶುಕ್ರವಾರ ಭತ್ತದ ಮುಡಿಗಳಿಗೆ ಅದಮಾರು ಮಠದ ಹಿತಿಯ ಯತಿ ವಿಶ್ವಪ್ರಿಯ ಶ್ರೀಗಳು ಪೂಜೆ ಸಲ್ಲಿಸಿದರು.   

ಉಡುಪಿ: ಅಷ್ಠಮಠಗಳಲ್ಲಿ ಒಂದಾದ ಅದಮಾರು ಮಠದ ಪರ್ಯಾಯ 2020ರ ಜ.18ರಿಂದ ಆರಂಭವಾಗಲಿದ್ದು, ಇದರ ಪೂರ್ವಭಾವಿಯಾಗಿ ಶುಕ್ರವಾರ ಭತ್ತ ಮುಹೂರ್ತ ನೆರವೇರಿತು.ಪರ್ಯಾಯ ಪೀಠ ಅಲಂಕರಿಸುವ ಹಿರಿಯ ಯತಿ ವಿಶ್ವಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ಮುಹೂರ್ತ ನಡೆದಿದ್ದು ವಿಶೇಷವಾಗಿತ್ತು.

ಬೆಳಿಗ್ಗಿನಿಂದಲೇ ಅದಮಾರು ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವರಿಗೆ ನವಗ್ರಹ ಪೂಜೆಯ ಬಳಿಕ, ಅನಂತೇಶ್ವರ, ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಕೃಷ್ಣಮಠದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಚಿನ್ನದ ಪಲ್ಲಕ್ಕಿಯಲ್ಲಿ ಭತ್ತದ ಮುಡಿಗಳನ್ನಿಟ್ಟು ರಥಬೀದಿಯಲ್ಲಿ ವೈಭವದ ಮೆರವಣಿಗೆಯಲ್ಲಿ ಸಾಗುತ್ತಾ, 9.55ಕ್ಕೆ ಕೃಷ್ಣಮಠದ ಬಡುಗುಮಾಳಿಗೆಯ ಉಗ್ರಾಣದಲ್ಲಿ ಧಾನ್ಯ ಮುಹೂರ್ತ ನೆರವೇರಿತು. ಈ ಸಂದರ್ಭ ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನಗಳಿಗೆ ನವಗ್ರಹ ಧಾನ್ಯ, ಏಳು ಮಠಗಳಿಗೆ ಧಾನ್ಯ, ಉಪ ಮಠಗಳಿಗೆ ಫಲದಾನ ಸಮರ್ಪಿಸಲಾಯಿತು.

ADVERTISEMENT

ಭತ್ತ ಮುಹೂರ್ತ ಏಕೆ?
ಮುಂದಿನ ಪರ್ಯಾಯದ ಅವಧಿಯಲ್ಲಿ ಅನ್ನ ಪ್ರಸಾದಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿ ಭತ್ತವನ್ನು ದಾಸ್ತಾನಿಟ್ಟುಕೊಳ್ಳುವ ಸಂಪ್ರದಾಯ ನೂರಾರು ವರ್ಷಗಳಿಂದ ಅಷ್ಠಮಠಗಳಲ್ಲಿ ಇದೆ. ವಾದಿರಾಜರು ಹಾಕಿಕೊಟ್ಟ ಈ ಸಂಪ್ರದಾಯವನ್ನು ಎಲ್ಲ ಮಠಗಳು ತಪ್ಪದೆ ಪಾಲಿಸಿಕೊಂಡು ಬರುತ್ತಿವೆ.

ಈಗಾಗಲೇ ಮುಂದಿನ ಪರ್ಯಾಯದ ಒಂದು ವರ್ಷಕ್ಕೆ ಸಾಲುವಷ್ಟು ಅಕ್ಕಿಯನ್ನು ದಾಸ್ತಾನಿರಿಸಲಾಗಿದೆ. 2ನೇ ವರ್ಷಕ್ಕೆ ದಾಸೋಹಕ್ಕೆ ಸಮಸ್ಯೆಯಾಗಬಾರದು ಎಂದು ಮುಂಚಿತವಾಗಿ ಭತ್ತವನ್ನು ದಾಸ್ತಾನಿರಿಸಲಾಗುತ್ತಿದೆ.

ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠಾಪನೆ:ಜುಲೈ 4ರಂದುಕಟ್ಟಿಗೆ ಮುಹೂರ್ತ ನಡೆದು, 4 ತಿಂಗಳಲ್ಲಿ ಸುಂದರವಾದ ಕಟ್ಟಿಗೆಯ ರಥ ನಿರ್ಮಿಸಲಾಗಿತ್ತು. ಗುರುವಾರ ಭತ್ತ ಮುಹೂರ್ತದ ಜತೆಗೆ ಕಟ್ಟಿಗೆ ರಥಕ್ಕೂ ಶಿಖರ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಚೂರ್ಣೋತ್ಸವದ ಹೊತ್ತಿಗೆ ಕಟ್ಟಿಗೆ ರಥವನ್ನು ಆಕರ್ಷಕವಾಗಿ ಅಲಂಕರಿಸಲಾಗುತ್ತದೆ.

ಮಠದ ಪುರೋಹಿತರಾದ ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಮುಹೂರ್ತದ ವಿಧಿವಿಧಾನಗಳು ನಡೆದವು.

ಶಾಸಕ ರಘುಪತಿ ಭಟ್‌, ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌, ಮುಖಂಡರಾದ ಎ.ಜಿ.ಕೊಡ್ಗಿ, ಯು.ಆರ್.ಸಭಾಪತಿ, ಭಾಸ್ಕರ್ ರಾವ್ ಕಿದಿಯೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನೀತಾ ಗುರುರಾಜ ಪೂಜಾರಿ, ಶ್ರೀಪತಿ ಭಟ್‌, ಶ್ರೀರಮಣ ಉಪಾಧ್ಯಾಯ, ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ ಹೆಗ್ಡೆ ಉಪಸ್ಥಿತರಿದ್ದರು.ಮಠದ ಭಕ್ತರು, ಶಿಷ್ಯರು, ವಿದ್ವಾಂಸರು, ಅಭಿಮಾನಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.