
ಉಡುಪಿ: ‘ಜಗತ್ತಿನಲ್ಲಿ ಹೇಗೆ ಇರಬೇಕು ಎಂಬುದಕ್ಕೆ ಭಗವದ್ಗೀತೆ ಮಾರ್ಗದರ್ಶನ ನೀಡುತ್ತದೆ. ಆದ್ದರಿಂದ ಅದು ವಿಶ್ವಕ್ಕೇ ಸಂವಿಧಾನವಾಗಿದೆ. ವಿಶ್ವ ಹೇಗೆ ಮುನ್ನಡೆಯಬೇಕು ಎಂಬ ವಿಚಾರವನ್ನು ಕೃಷ್ಣನು ಅದರಲ್ಲಿ ಹೇಳಿದ್ದಾನೆ’ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಗೀತೋತ್ಸವದ ಉದ್ಘಾಟನಾ ಸಮಾರಂಭ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಭಗವದ್ಗೀತೆಯ ಆದರ್ಶಗಳನ್ನು ನಾವು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತೇವೆಯೋ ಅಲ್ಲಿಯ ತನಕ ವಿಶ್ವವು ಸುಸ್ಥಿತಿಯಲ್ಲಿರುತ್ತದೆ. ದೇಶದ ಪ್ರಜೆಯಾಗಿ ಅಲ್ಲಿನ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಅದೇ ರೀತಿ ವಿಶ್ವದ ಪ್ರಜೆಯಾಗಿ ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಗೌರವಿಸಬೇಕು’ ಎಂದರು.
‘ಸಂವಿಧಾನಕ್ಕೆ ವಿರುದ್ಧವಾಗಿ ನಡೆದರೆ ಆ ವ್ಯಕ್ತಿಗೆ ಆ ದೇಶದಲ್ಲಿ ಇರಲು ಅಧಿಕಾರವಿಲ್ಲ. ಅದೇ ರೀತಿ ಭಗವದ್ಗೀತೆಯನ್ನು ಅನುಸರಿಸದೆ ಹೋದರೆ ಈ ವಿಶ್ವದಲ್ಲಿ ಬದುಕುವ ಹಕ್ಕನ್ನು ಭಗವಂತ ನೀಡುವುದಿಲ್ಲ’ ಎಂದು ಹೇಳಿದರು.
‘ಭಗವದ್ಗೀತೆ ಎಲ್ಲರಿಗೂ ಸಂಬಂಧಪಟ್ಟ ಗ್ರಂಥ, ಅದನ್ನು ಮತೀಯ ಗ್ರಂಥ ಎಂಬುದಾಗಿ ಪರಿಗಣನೆ ಮಾಡಬಾರದು. ಅದು ಮತೀಯ ಗ್ರಂಥವಲ್ಲ ಎಲ್ಲರ ಮತಿಯನ್ನು ನಿರ್ದೇಶಿಸುವ, ಮಾರ್ಗದರ್ಶನ ಮಾಡುವ ಗ್ರಂಥವಾಗಿದ್ದು, ವಿಶ್ವ ಮತೀಯ ಗ್ರಂಥವಾಗಿದೆ’ ಎಂದು ತಿಳಿಸಿದರು.
‘ಭಗವದ್ಗೀತೆಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕಾಗಿದೆ. ಇಂದು ಅದಕ್ಕೆ ಹಿಂದೂಗಳಲ್ಲದವರು ಕೂಡ ವಿಶೇಷ ಗೌರವ ಸಲ್ಲಿಸುತ್ತಿದ್ದಾರೆ. ಅವರಿಗೆ ಕೂಡ ಈ ಗ್ರಂಥ ವಿಶೇಷ ಸ್ಪೂರ್ತಿಯನ್ನು ನೀಡಿದೆ’ ಎಂದರು.
‘ಶ್ರೀಕೃಷ್ಣನು ಗೀತೆಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸ್ಪಂದಿಸುತ್ತಾನೆ. ಭಗವದ್ಗೀತೆಯು ಪ್ರತಿಯೊಬ್ಬರಲ್ಲೂ ಮಾತನಾಡುವ ಗ್ರಂಥವಾಗಿದೆ. ನಮ್ಮ ಮನಸ್ಸಿನ ವಿಚಾರಗಳಿಗೆ ಅದು ಸ್ಪಂದಿಸುತ್ತದೆ’ ಎಂದು ಹೇಳಿದರು.
‘ಪ್ರತಿಯೊಬ್ಬರು ಕೂಡ ಗೀತೆಯ ಸಂದೇಶವನ್ನು ಅರಿತು ಬದುಕಿನಲ್ಲಿ ಪಾಲಿಸಬೇಕು. ಅದರ ಪರಿಜ್ಞಾನ ಪ್ರತಿಯೊಬ್ಬರಿಗೂ ಇರಬೇಕೆನ್ನುವ ಉದ್ದೇಶದಿಂದ ಪರ್ಯಾಯ ಸಂದರ್ಭದಲ್ಲಿ ಕೃಷ್ಣನ ಆರಾಧನೆಯನ್ನು ಗೀತೆಯ ಮೂಲಕ ಮಾಡುತ್ತಿದ್ದೇವೆ’ ಎಂದರು.
ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಸತೀಶ್ ಯು. ಪೈ, ಸಂಧ್ಯಾ ಪೈ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಹಾರ್ವರ್ಡ್ ವಿ.ವಿ.ಯ ಪ್ರೊ. ಫ್ರ್ಯಾನ್ಸಿಸ್ ಕ್ಲೂನೀ, ಸೀಟನ್ ಹಾಲ್ ವಿ.ವಿ.ಯ ಪ್ರೊ. ಅ್ಯಲನ್ ಬ್ರಿಲ್, ವಿದ್ವಾಂಸ ಕೇಶವ ರಾವ್ ತಾಡಪತ್ರಿ ಉಪಸ್ಥಿತರಿದ್ದರು. ಸುಪ್ರಸಾದ್ ಶೆಟ್ಟಿ ಬೈಕಾಡಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.