ADVERTISEMENT

ಗೀತೆಯ ಮಾರ್ಗದರ್ಶನ ವಿಶ್ವಕ್ಕೆ ಅಗತ್ಯ: ಪುತ್ತಿಗೆ ಶ್ರೀ

ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವದಲ್ಲಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:21 IST
Last Updated 28 ಡಿಸೆಂಬರ್ 2025, 5:21 IST
ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಅದಮಾರು ಶ್ರೀ ಉದ್ಘಾಟಿಸಿದರು
ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಅದಮಾರು ಶ್ರೀ ಉದ್ಘಾಟಿಸಿದರು   

ಉಡುಪಿ: ಇಂದು ಜಗತ್ತು ಸಾಗುವ ರೀತಿ, ವಿಶ್ವ ನಾಯಕರ ನಿರ್ಧಾರಗಳನ್ನು ಗಮನಿಸಿದರೆ ಈ ಜಗತ್ತು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಆತಂಕ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ಜಗತ್ತನ್ನು ರಕ್ಷಣೆ ಮಾಡಲು ಭಗವದ್ಗೀತೆಯ ಆದರ್ಶದಿಂದ ಮಾತ್ರ ಸಾಧ್ಯ. ವಿಶ್ವದ ಸುಸ್ಥಿತಿಗೆ ಭಗವದ್ಗೀತೆಯ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣಮಠದ ರಥಬೀದಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾರ್ಥಸಾರಥಿ ಸುವರ್ಣ ರಥದ ಪ್ರಥಮ ರಥೋತ್ಸವದಲ್ಲಿ ಅವರು ಮಾತನಾಡಿದರು.

ಕೃಷ್ಣ ಪಾರ್ಥಸಾರಥಿ ಮಾತ್ರವಲ್ಲ, ವಿಶ್ವದ ಸಾರಥಿಯೂ ಹೌದು. ಇಡೀ ವಿಶ್ವವನ್ನು ಮುನ್ನಡೆಸುವುದು ಭಗವಂತ. ಆದ್ದರಿಂದ ಜಗತ್ತಿನಾದ್ಯಂತ ಗೀತೆಯ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಾವು ಪ್ರಾಶಸ್ತ್ಯ ನೀಡಿದ್ದೇವೆ ಎಂದರು.

ADVERTISEMENT

ನಮ್ಮ ಪರ್ಯಾಯಕ್ಕೆ ವಿಶ್ವ ಗೀತಾ ಪರ್ಯಾಯ ಎಂದು ಹೆಸರಿಟ್ಟು, ಪರ್ಯಾಯದ ಎಲ್ಲಾ ಕಾರ್ಯಕ್ರಮಗಳನ್ನು ಗೀತೆಗೆ ಸಂಬಂಧಿಸಿಯೇ ನಡೆಸಲಾಗಿದೆ ಎಂದು ಹೇಳಿದರು.

ಪ್ರತಿಯೊಂದು ಮನೆಯಲ್ಲೂ ಭಗವದ್ಗೀತೆ ಇರಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ಗೀತೆಯ ಬಗ್ಗೆ ಶ್ರದ್ಧೆ ಮೂಡಿಸಬೇಕು. ನಮ್ಮ ನಾಲ್ಕನೇ ಪರ್ಯಾಯದ ಎಲ್ಲಾ ಯೋಜನೆಗಳು ಸುವರ್ಣ ಪಾರ್ಥಸಾರಥಿ ರಥ ಸಮರ್ಪಣೆಯ ಮೂಲಕ ಪೂರ್ಣಗೊಂಡಿದೆ. ಭಕ್ತರ ಭಕ್ತಿಯ ಶಕ್ತಿಯಿಂದ ಅದು ಸಕಾರಗೊಂಡಿದೆ ಎಂದರು.

ಇಡೀ ಭಗವದ್ಗೀತೆಯನ್ನು ₹ 2 ಕೋಟಿ ವೆಚ್ಚದ ಚಿನ್ನದ ತಗಡಿನಲ್ಲಿ ಬರೆದು ಕೃಷ್ಣನಿಗೆ ಭಕ್ತರೊಬ್ಬರು ಸಮರ್ಪಿಸಲಿದ್ದಾರೆ ಎಂದೂ ತಿಳಿಸಿದರು.

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಇವತ್ತು ದೇಶೀಯವಲ್ಲದ ಸಂಸ್ಕೃತಿಯ ಪ್ರಭಾವದಿಂದ ಎಲ್ಲರೂ ದಾರಿ ತಪ್ಪುತ್ತಿರುವ ವೇಳೆಯಲ್ಲಿ ಪುತ್ತಿಗೆ ಶ್ರೀಗಳು ಇಡೀ ಪ್ರಪಂಚಕ್ಕೆ ಭಾರತೀಯ ಪರಂಪರೆಯ ಮಹತ್ವವನ್ನು ಸಾರಿದ್ದಾರೆ ಎಂದರು.

ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಉದ್ಯಮಿ ವಿಜಯ ಶಂಕೇಶ್ವರ್‌, ಲಕ್ಷ್ಮೀನಾರಾಯಣ ಅಸ್ರಣ್ಣ ಉಪಸ್ಥಿತರಿದ್ದರು. ಮಹಿತೋಷ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ರಥಬೀದಿಯಲ್ಲಿ ಪಾರ್ಥಸಾರಥಿ ಸುವರ್ಣ ರಥದ ರಥೋತ್ಸವ ಜರುಗಿತು.

‘ಭಾರತವು ಭಾಗ್ಯವಿಧಾತ ದೇಶ’

ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ ‘ಭಗವದ್ಗೀತೆಯನ್ನು ನೀಡುವ ಮೂಲಕ ಭಾರತವು ವಿಶ್ವಕ್ಕೆ ಭಾಗ್ಯವನ್ನು ಕೊಟ್ಟಿದೆ. ಆದ್ದರಿಂದ ಭಾರತವು ಭಾಗ್ಯವಿಧಾತ ದೇಶವಾಗಿದೆ’ ಎಂದರು. ‘ಭಾರತ ಮಾತೆಯ ಸಿಂಧೂರವನ್ನು ಕೆಣಕಿದವರಿಗೆ ಉಳಿಗಾಲವಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ. ಭಾರತ ಮಾತೆಗೆ ಕುಂಕುಮ ಸೌಭಾಗ್ಯವನ್ನು ಕೊಟ್ಟವರು ಭಗವದ್ಗೀತೆಯನ್ನು ಅಧ್ಯಯನ ಮಾಡಿರುವ ಮೋದಿ’ ಎಂದರು. ‘ಭಗವದ್ಗೀತೆಯನ್ನು ಅಧ್ಯಯನ ಮಾಡಿರುವ ಕಾರಣ ಕೃಷ್ಣ ಮಠದ ಸ್ವಾಮೀಜಿಗಳು ಎರಡು ವರ್ಷ ಕಳೆದಾಗ ನಿರ್ಲಿಪ್ತವಾಗಿ ಪೀಠದಿಂದ ಇಳಿಯುತ್ತಾರೆ. ಯಾರೆಲ್ಲ ಎರಡೂವರೆ ವರ್ಷ ನಾನು ಎರಡೂವರೆ ವರ್ಷ ನೀನು ಎನ್ನುತ್ತಾರೋ ಅವರು ಭಗವದ್ಗೀತೆ ಓದಿದ್ದರೆ ಆ ಸಮಸ್ಯೆ ಬರುತ್ತಿರಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.