ADVERTISEMENT

ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌: 216 ಗಂಟೆಗಳ ಭರತನಾಟ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:17 IST
Last Updated 22 ಆಗಸ್ಟ್ 2025, 5:17 IST
ಕಾರ್ಯಕ್ರಮವನ್ನು ಮಾಜಿ ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಮಾಜಿ ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು   

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ನಿವಾಸಿ ವಿದುಷಿ ದೀಕ್ಷಾ ವಿ. ಅವರು ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ದಾಖಲೆಗಾಗಿ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನವನ್ನು ಗುರುವಾರ ಡಾ. ಜಿ.ಶಂಕರ್‌ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಆರಂಭಿಸಿದರು.

ಭರತನಾಟ್ಯಕ್ಕೂ ಮೊದಲು ನಡೆದ ಸಮಾರಂಭವನ್ನು ಮಾಜಿ ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ಸಾಧನೆ ಮಾಡಲು ಸಂಕಲ್ಪ ಮತ್ತು ಧೈರ್ಯ ಅತಿ ಮುಖ್ಯ. ದೀಕ್ಷಾ ಅವರು ಧೈರ್ಯದಿಂದ ಇಂತಹ ಸಾಧನೆ ಮಾಡಲು ಹೊರಟಿದ್ದಾರೆ ಎಂದರು.

ದೀಕ್ಷಾ ಮಾತನಾಡಿ, ನಿರಂತರ 24 ಗಂಟೆಗಳ ಕಾಲ ಹಾಡು ಹಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ ಯಶವಂತ್‌ ಎಂ.ಜಿ. ಅವರ ಪ್ರೇರಣೆಯಿಂದ ಈ ದಾಖಲೆಗೆ ಹೊರಟಿದ್ದೇನೆ ಎಂದು ತಿಳಿಸಿದರು.

ADVERTISEMENT

ಮಣಿಪಾಲದ ರತ್ನ ಸಂಜೀವ ಕಲಾಮಂಡಲವು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ. ಡಾ. ಜಿ.ಶಂಕರ್‌ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸೋಜನ್‌ ಕೆ.ಜಿ., ಗೀತಾಂಜಲಿ ಸುವರ್ಣ, ಅಶ್ವಿನಿ ಮಹೇಶ್‌ ಠಾಕೂರ್‌, ವೀಣಾ ಶೆಟ್ಟಿ ಇದ್ದರು. ಮಹೇಶ್‌ ಠಾಕೂರ್‌ ಸ್ವಾಗತಿಸಿದರು. ರಾಮಚಂದ್ರ ಪಾಟ್ಕರ್‌ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.