
ಬ್ರಹ್ಮಾವರ: ಉಪ್ಪೂರು ಗ್ರಾಮದ ಪರಾರಿಯ ಇತಿಹಾಸ ಪ್ರಸಿದ್ಧ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಹೊಸ ರೂಪ ಪಡೆಯುತ್ತಿದೆ.
ಸ್ವರ್ಣ ನದಿಯ ತಟದಲ್ಲಿರುವ ಈ ಕ್ಷೇತ್ರ ಇಷ್ಟಾರ್ಥ ಸಿದ್ದಿಗೆ ಪ್ರಸಿದ್ಧವಾಗಿದೆ. ದೈವಸ್ಥಾನದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ಈಗಾಗಲೇ ಬೊಬ್ಬರ್ಯ ದೈವ ಹಾಗೂ ಪರಿವಾರ ದೈವಗಳಾದ ನಂದಿಕೋಣ ಮತ್ತು ನೀಚ ದೈವದ ಶಿಲಾಮಯ ಗುಡಿಯ ನಿರ್ಮಾಣ ಕಾರ್ಯವು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಶಿಲಾಮಯ ಗುಡಿಗೆ ಛಾವಣಿ ಅಳವಡಿಕೆ ಹಾಗೂ ದೈವಸ್ಥಾನದ ಸಂಪೂರ್ಣ ಆವರಣಕ್ಕೆ ಛಾವಣಿ ವ್ಯವಸ್ಥೆ ಕಲ್ಪಿಸಬೇಕಿದೆ. ನೆಲಹಾಸು, ಸ್ವಾಗತ ಗೋಪುರ ನಿರ್ಮಾಣ, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿಗಳು ಬಾಕಿ ಉಳಿದಿದ್ದು, ಇವುಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಬೊಬ್ಬರ್ಯ ಮತ್ತು ಪರಿವಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಧ್ಯಕ್ಷ ಸತೀಶ ಪೂಜಾರಿ ಕೀಳಂಜೆ ಮತ್ತು ಅಧ್ಯಕ್ಷ ವೇದಮೂರ್ತಿ ಗುರುರಾಜ ಭಟ್ ಕೊಳಲಗಿರಿ, ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್ ಪರಾರಿ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಏ.18ರಂದು ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, 19ರಂದು ಪರಿವಾರ ದೈವಗಳ ಸಹಿತ ಬೊಬ್ಬರ್ಯ ದೈವದ ಪುನರ್ ಪ್ರತಿಷ್ಠೆ, 20ರಂದು ಬ್ರಹ್ಮಕಲಶೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೈವದ ನೇಮೋತ್ಸವ ನಡೆಸಲಾಗುವುದು ಎಂದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.