ADVERTISEMENT

ಬ್ರಹ್ಮಾವರ | ಹೆದ್ದಾರಿ ಅವ್ಯವಸ್ಥೆ: ಹೋರಾಟಕ್ಕೆ ಸಿದ್ಧತೆ

ಅಪಘಾತ ತಾಣವಾಗುತ್ತಿರುವ ಬ್ರಹ್ಮಾವರ ರಾ.ಹೆ: ಮೇಲ್ಸೇತುವೆ, ಸರ್ವಿಸ್‌ ರಸ್ತೆಗೆ ಸಾರ್ವಜನಿಕರ ಆಗ್ರಹ

ಎ.ಶೇಷಗಿರಿ ಭಟ್ಟ‌
Published 7 ಏಪ್ರಿಲ್ 2025, 7:21 IST
Last Updated 7 ಏಪ್ರಿಲ್ 2025, 7:21 IST
ಅಫಘಾತದ ತಾಣವಾಗುತ್ತಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯು ಟರ್ನ್‌ಗಳು .
ಅಫಘಾತದ ತಾಣವಾಗುತ್ತಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯು ಟರ್ನ್‌ಗಳು .   

ಬ್ರಹ್ಮಾವರ: ತಾಲ್ಲೂಕಿನ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಆಗುತ್ತಿರುವ ಸಾವು ನೋವುಗಳಿಂದ ಎಚ್ಚೆತ್ತಿರುವ ಬ್ರಹ್ಮಾವರದ ಜನರು, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ.

ಬ್ರಹ್ಮಾವರ ಬಸ್‌ ನಿಲ್ದಾಣ, ಮಹೇಶ್‌ ಆಸ್ಪತ್ರೆ, ಬಾರ್ಕೂರು ವೃತ್ತದ ಸಮಸ್ಯೆಗಳಲ್ಲದೇ ತಾಲ್ಲೂಕಿನ ಸಾಲಿಗ್ರಾಮ, ಕಾರ್ಕಡ ಸಂಪರ್ಕ ರಸ್ತೆ, ಕೋಟ ಹೈಸ್ಕೂಲ್‌ (ಕೋಟ ಮೂರ್‌ಕೈ) ಬಳಿಯ ರಾಷ್ಟ್ರೀಯ ಹೆದ್ದಾರಿಯಿಂದ ಬನ್ನಾಡಿ, ವಡ್ಡರ್ಸೆ ಸಾಹೇಬರಕಟ್ಟೆಗೆ ಸಾಗುವ ಸಂಪರ್ಕ ರಸ್ತೆಯಲ್ಲಿ ಸಹ ಅನೇಕ ಅಫಘಾತಗಳು ಸಂಭವಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲೀ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಸಮಸ್ಯೆಯ ಪರಿಹಾರಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ. ಈಚೆಗೆ ಬ್ರಹ್ಮಾವರದಲ್ಲಿ ಸಂಭವಿಸಿದ ಅಪಘಾತದಲ್ಲಿ ಶಾಲಾ ಬಾಲಕ ಮೃತಪಟ್ಟಿರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ.

ಬ್ರಹ್ಮಾವರ, ಕೋಟ ಸಾಲಿಗ್ರಾಮ ಪರಿಸರದಲ್ಲಿ ಸರ್ವಿಸ್‌ ರಸ್ತೆ ಇನ್ನೂ ಕೂಡ ಪೂರ್ಣಗೊಂಡಿಲ್ಲ. ಹಲವಾರು ಹೋರಾಟಗಳು ನಡೆದಾಗ ತೇಪೆ ಹಾಕುವ ಕೆಲಸವೊಂದು ಬಿಟ್ಟರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಸರ್ವಿಸ್‌ ರಸ್ತೆ, ಮೇಲ್ಸೇತುವೆ ರಚನೆ, ದಾರಿದೀಪ ಅಳವಡಿಸುವ ಬಗ್ಗೆ ಪ್ರತಿ ಬಾರಿಯೂ ಹೋರಾಟ, ಚರ್ಚೆ, ಭರವಸೆ, ಮನವಿ ಬಿಟ್ಟರೆ ಇದುವರೆಗೆ ಯಾವುದೇ ಕಾಮಗಾರಿಯಾಗಿಲ್ಲ ಎಂದೂ ಜನರು ದೂರುತ್ತಾರೆ.

ADVERTISEMENT

ಬ್ರಹ್ಮಾವರದ ಎಸ್‌.ಎಂ.ಎಸ್‌ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ನಿರ್ಮಲಾ ಪ್ರೌಢ ಮತ್ತು ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಅಲ್ಲದೇ ಪ್ರಾಥಮಿಕ ಶಾಲೆಗಳು ಇದ್ದು ಸಾವಿರಾರು ವಿದ್ಯಾರ್ಥಿಗಳು ಹೆದ್ದಾರಿಯನ್ನು ದಾಟಿ ಶಾಲೆಗಳಿಗೆ ಹೋಗಬೇಕಾಗಿದೆ. ನಿರಂತರ ವಾಹನಗಳ ಓಡಾಟದಿಂದ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದ ಅನಿರ್ವಾಯತೆ ಬ್ರಹ್ಮಾವರ ಜನತೆಯದ್ದು. ಸಾಸ್ತಾನ, ಸಾಲಿಗ್ರಾಮ ಮತ್ತು ಕೋಟದಲ್ಲಿಯೂ ಇದೇ ಸ್ಥಿತಿ ಇದೆ.

ಇನ್ನೊಂದೆಡೆ ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಲು ರಸ್ತೆ ದಾಟಿ ಹೋಗಬೇಕಾಗಿದೆ. ವಯಸ್ಸಾದವರ ಪಾಡಂತೂ ಇಲ್ಲಿ ಹೇಳ ತೀರದು. ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳೊಂದಿಗೆ, ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮನವಿ ನೀಡಿದ್ದರೂ ಯಾವುದೇ ಸ್ಪಂದನ ದೊರಕಿಲ್ಲ. ಇದೀಗ ತಾಲ್ಲೂಕು ಆಡಳಿತ ಕಚೇರಿಯೂ ಬಸ್‌ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿರುವುದರಿಂದ ಜನರ ಓಡಾಟಕ್ಕೂ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ರಸ್ತೆಯೇ ಸರ್ಕಾರಿ ಬಸ್‌ ನಿಲ್ದಾಣ: ತಾಲ್ಲೂಕಿನಲ್ಲಿ ಸರ್ಕಾರಿ ಬಸ್‌ ನಿಲ್ದಾಣ ಇಲ್ಲದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸರ್ಕಾರಿ ಬಸ್‌ಗಳು ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗುತ್ತಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಇದಕ್ಕೂ ಸೂಕ್ತ ಪರಿಹಾರದ ಅವಶ್ಯಕತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಪರಿಹಾರ ಏನು: ಬ್ರಹ್ಮಾವರದಲ್ಲಿ ಎಸ್‌.ಎಂ.ಎಸ್‌ ಕಾಲೇಜಿನಿಂದ ಬಾರ್ಕೂರು ಕ್ರಾಸ್‌ವರೆಗೆ ಮೇಲ್ಸೇತುವೆ ನಿರ್ಮಾಣ ಒಂದೇ ಸಮಸ್ಯೆಗೆ ಪರಿಹಾರ ಎನ್ನುವುದು ಜನರ ಅಭಿಪ್ರಾಯ. ಶಾಲಾ ಕಾಲೇಜುಗಳಿಗೆ ಹೋಗಲು, ಸರ್ಕಾರಿ ಆಸ್ಪತ್ರೆ ಮತ್ತು ತಹಶೀಲ್ದಾರ್‌ ಕಚೇರಿಗೂ ಸಾಗಲು ಇದರಿಂದ ಪರಿಹಾರ ಸಿಗುತ್ತದೆ. ಇದಲ್ಲದೇ ಮಾಬುಕಳ ಉಪ್ಪಿನಕೋಟೆಯಿಂದ ಎಸ್‌.ಎಂ.ಎಸ್‌ ಅಥವಾ ದೂಪದಕಟ್ಟೆಯವರೆಗೆ ಎರಡೂ ಬದಿಯಲ್ಲಿ ಸರ್ವಿಸ್‌ ರಸ್ತೆಯೂ ನಿರ್ಮಾಣವಾದಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುತ್ತಾರೆ.

ಕೋಟ ಬಸ್‌ ನಿಲ್ದಾಣ, ಕೋಟ ಹೈಸ್ಕೂಲ್‌, ಸಾಲಿಗ್ರಾಮದಲ್ಲಿಯೂ ಇಂತಹುದೇ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಸ್ಪಷ್ಟನೆ:  ಈಗಾಗಲೇ ಬ್ರಹ್ಮಾವರದಲ್ಲಿ ಫ್ಲೈ ಓವರ್ ಅಥವಾ ಅಂಡರ್‌ಪಾಸ್‌ ಕಾರ್ಯ ಸಾಧ್ಯತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಇದೇ 7ರೊಳಗೆ ವರದಿ ಬರುವ ನಿರೀಕ್ಷೆಯಿದೆ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಶಾಶ್ವತ ಸೇವಾ ರಸ್ತೆಯನ್ನು ನಿರ್ಮಿಸುವ ಹೆಚ್ಚಿನ ಯೋಜನೆಗಳು ಸಹ ಜಾರಿಯಲ್ಲಿವೆ, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚನೆಗಳಿವೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಹೆಚ್ಚಿನ ಪರಿಹಾರಗಳನ್ನು ಅನ್ವೇಷಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಇದೇ 8ರಂದು ಬ್ರಹ್ಮಾವರದ ತಾಲ್ಲೂಕು ಆಡಳಿತ ಸೌಧದದಲ್ಲಿ ಸಭೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಹೋರಾಟಕ್ಕೆ ಸಜ್ಜಾಗುತ್ತಿದ್ದಂತೆ ಇಲ್ಲಿಯ ಮಹೇಶ್‌ ಆಸ್ಪತ್ರೆಯ ಬಳಿ ಹೆದ್ದಾರಿಯ ಎರಡು ಬದಿ ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಸಮತಟ್ಟು ಮಾಡಿ ಹೆದ್ದಾರಿ ದಾಟುವವವರಿಗೆ ಝೀಬ್ರಾ ಕ್ರಾಸಿಂಗ್‌ ಮಾಡಿರುವುದು.
ಮೇಲ್ಸೇತುವೆ ನಿರ್ಮಾಣ ಒಂದೇ ಶಾಶ್ವತ ಪರಿಹಾರ ಏ. 8ರಂದು ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಸಭೆ
ಕೋಟ ಹೈಸ್ಕೂಲ್‌ ಬಳಿ ಮೇಲ್ಸೇತುವೆ ನಿರ್ಮಿಸಬೇಕು. ತೆಕ್ಕಟೆಯಿಂದ ಮಣೂರು ಕೋಟ ಸಾಲಿಗ್ರಾಮದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ
ಶ್ಯಾಮ ಸುಂದರ ನಾಯರಿ ಕೋಟ ನಿವಾಸಿ
‘ಸಮಸ್ಯೆ ಪರಿಹರಿಸದಿದ್ದರೆ ಹೋರಾಟ’
ಬ್ರಹ್ಮಾವರದ ರಸ್ತೆ ಸಮಸ್ಯೆಗಳ ಬಗ್ಗೆ ಇದೇ 8ರಂದು ನಡೆಯುವ ಸಭೆಯಲ್ಲಿ ಜನರಿಗೆ ಅನುಕೂಲವಾಗುವ ಯಾವುದೇ ನಿರ್ಣಯ ಕೈಗೊಳ್ಳದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು. ಇದೇ 12ರಂದು ಅಥವಾ ಮೂರ್ನಾಲ್ಕು ದಿನದಲ್ಲಿ ಬ್ರಹ್ಮಾವರ ಬಂದ್‌ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಹಮ್ಮಿಕೊಂಡು ಮೇಲ್ಸೇತುವೆ ನಿರ್ಮಾಣಕ್ಕೆ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರ ಅಲ್ವಿನ್‌ ಅಂದ್ರಾದೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.