ADVERTISEMENT

ಬ್ರಹ್ಮಾವರ | ಯುವತಿಯ ಮೇಲೆ ಹಲ್ಲೆ ಪ್ರಕರಣ: ಸಿಐಡಿ ತನಿಖೆಗೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:00 IST
Last Updated 25 ಡಿಸೆಂಬರ್ 2025, 7:00 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಉಡುಪಿ: ‘ಬ್ರಹ್ಮಾವರದಲ್ಲಿ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿದ್ದ ಪೊಲೀಸರು, ಅಕ್ಷತಾ ಪೂಜಾರಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಯುವತಿಯ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ತಿಳಿಸಿದ್ದಾರೆ.

ADVERTISEMENT

‘ಆರೋಪ ಎದುರಿಸುತ್ತಿರುವ ಮೂವರು ಪೊಲೀಸ್‌ ಅಧಿಕಾರಿಗಳನ್ನು ರಜೆಯಲ್ಲಿ ಕಳುಹಿಸಲಾಗಿದೆ. ಪಾರದರ್ಶಕ ತನಿಖೆ ನಡೆಯಲಿ ಎಂಬ ಕಾರಣಕ್ಕೆ ಸಿಐಡಿಗೆ ಒಪ್ಪಿಸುವಂತೆ ಪ್ರಸ್ತಾವನೆ ಕಳಿಸಿದ್ದೆವು’ ಎಂದು ಅವರು ಹೇಳಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಕ್ಷತಾ ಪೂಜಾರಿ ವಿರುದ್ಧ ದಾಖಲಾದ್ದ ಪ್ರಕರಣ ಹಾಗೂ ಪೊಲೀಸರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಈ ಹಿಂದೆ ಮಣಿಪಾಲ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು.

ಅಕ್ಷತಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಬಿಲ್ಲವ ಸಂಘಟನೆಗಳ ವತಿಯಿಂದ ಬ್ರಹ್ಮಾವರ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಈಚೆಗೆ ಪ್ರತಿಭಟನೆ ನಡೆದಿತ್ತು.

2014ರಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆಯ ಆಶಿಕ್‌ ಎಂಬುವವರಿಗೆ ಸಜೆಯಾಗಿ, ₹ 20 ಲಕ್ಷ ದಂಡ ಹಾಗೂ ಅದರ ಬಡ್ಡಿಯನ್ನು ಜಮಾ ಮಾಡುವಂತೆ ನ್ಯಾಯಾಲಯದಿಂದ ತೀರ್ಪು ಬಂದಿತ್ತು. ಆರೋಪಿ ಆಶಿಕ್‌ ನ್ಯಾಯಾಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದಿರುವುದರಿಂದ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ನ್ಯಾಯಾಲಯವು ಆದೇಶಿಸಿತ್ತು.

ಆಶಿಕ್‌ರನ್ನು ಬಂಧಿಸಲು ಪೊಲೀಸರು, ಅವರ ಸಂಬಂಧಿಯಾದ ಅಕ್ಷತಾ ಪೂಜಾರಿ ಅವರ ಮನೆಗೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.