ADVERTISEMENT

‘ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ’

ಬ್ರಹ್ಮಾವರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 4:20 IST
Last Updated 10 ಡಿಸೆಂಬರ್ 2025, 4:20 IST
ತಹಶೀಲ್ದಾರ್‌ ಕಚೇರಿ ಎದುರು ಸಿಪಿಎಂ ವತಿಯಿಂದ ಪ್ರಚಾರಾಂದೋಲನ, ಪ್ರತಿಭಟನೆ ನಡೆಯಿತು
ತಹಶೀಲ್ದಾರ್‌ ಕಚೇರಿ ಎದುರು ಸಿಪಿಎಂ ವತಿಯಿಂದ ಪ್ರಚಾರಾಂದೋಲನ, ಪ್ರತಿಭಟನೆ ನಡೆಯಿತು   

ಬ್ರಹ್ಮಾವರ: ‘ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಜಿಲ್ಲೆಯ ಶಾಸಕರು ಮುಂದಾಗಬೇಕು’ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ ಕಲ್ಲಾಗರ ಆಗ್ರಹಿಸಿದರು.

ತಹಶೀಲ್ದಾರ್‌ ಕಚೇರಿ ಎದುರು ಮಂಗಳವಾರ ನಡೆದ ಪ್ರಚಾರಾಂದೋಲನ, ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಬ್ರಹ್ಮಾವರದಲ್ಲಿ ಇಎಸ್ಐ ಆಸ್ಪತ್ರೆ ಮಂಜೂರಾಗಿ ವರ್ಷಗಳೇ ಕಳೆದರೂ ಕಾಮಗಾರಿ ಆರಂಭಿಸಲು ಮುತುವರ್ಜಿ ವಹಿಸದೆ ಇರುವುದರಿಂದ ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.

ಉಡುಪಿ ಸಿಪಿಎಂ ವಲಯ ಸಮಿತಿ ಕಾರ್ಯದರ್ಶಿ ಶಶಿಧರ ಗೊಲ್ಲ ಮಾತನಾಡಿ, ಬ್ರಹ್ಮಾವರ ತಾಲ್ಲೂಕು ರಚನೆ ಆಗಿದ್ದರೂ ತಾಲ್ಲೂಕು ಅಭಿವೃದ್ಧಿ ಕುಂಠಿತಗೊಂಡಿದೆ. ಜನರ ಸಮಸ್ಯೆಗಳು ಬೆಳೆಯುತ್ತಿವೆ. ಈ ಬಗ್ಗೆ ತಾಲ್ಲೂಕು ಆಡಳಿತ ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಸರ್ಕಾರ, ಜನಪ್ರತಿನಿಧಿಗಳಿಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರಮುಖ ಬೇಡಿಕೆಗಳು: ಬ್ರಹ್ಮಾವರದಲ್ಲಿ ಆರಂಭಿಸಲು ಉದ್ದೇಶಿಸಿರುವ ಇಎಸ್ಐ ಆಸ್ಪತ್ರೆ ಕಾಮಗಾರಿಗೆ ಚುರುಕು ಮುಟ್ಟಿಸಬೇಕು. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸರ್ಕಾರಿ ಆಸ್ಪತ್ರೆಯಾಗಿ ಮಾಡಬೇಕು. ಬ್ರಹ್ಮಾವರದ ಮಟಪಾಡಿ, ನೀಲಾವರ ಮಾರ್ಗದಲ್ಲಿ ಸರ್ಕಾರಿ ಬಸ್‌ ಸೇವೆ ಕಲ್ಪಿಸಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಸಿಗುವಂತೆ ಮಾಡಬೇಕು. ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಿಸಬೇಕು. ಹಂದಾಡಿ, ಮಟಪಾಡಿಯಲ್ಲಿ ಮಳೆಗಾಲದಲ್ಲಿ ಕೃಷಿಭೂಮಿ ಮಳೆಯಿಂದ ಹಾನಿಗೊಳಗಾಗುವುದನ್ನು ತಪ್ಪಿಸಲು ಚರಂಡಿ, ಸಂಕಗಳನ್ನು ನಿರ್ಮಿಸಬೇಕು. ಹಂದಾಡಿಯಲ್ಲಿ ಅವೈಜ್ಞಾನಿಕವಾಗಿ ಸಂಕ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಕೃಷಿ ಮುಳುಗಡೆಯಾಗಿ ನಾಶವಾಗುತ್ತಿದೆ. ಇದನ್ನು ಸರಿಪಡಿಸಿ ಕಾಂಕ್ರೀಟ್ ರಸ್ತೆ ಎತ್ತರ ಮಾಡಿ ಮರುನಿರ್ಮಾಣ ಮಾಡಬೇಕು.

ನಗರದ ಬಸ್ ನಿಲ್ದಾಣ ವಿಸ್ತಾರವಾಗಿ ಸರ್ಕಾರಿ ಜಾಗದಲ್ಲಿ ಮಾಡಲು ಕ್ರಮ ವಹಿಸಬೇಕು. ತಾಲ್ಲೂಕಿನಲ್ಲಿ ಕಾರ್ಮಿಕ ನಿರೀಕ್ಷಕರ ಕಚೇರಿ ಮಂಜೂರು ಮಾಡಿ ಖಾಯಂ ನಿರೀಕ್ಷಕರನ್ನು ನೇಮಿಸಬೇಕು. ಕೃಷಿ ಕಾಲೇಜನ್ನು ಪ್ರಾರಂಭಿಸಬೇಕು. ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಕೊಳಲಗಿರಿಯಲ್ಲಿ ಗ್ರಾಮಾಂತರ ಪೋಲೀಸ್ ಠಾಣೆ ಸ್ಥಾಪಿಸಬೇಕು. ಬೆಂಗಳೂರಿಗೆ ಮತ್ತೊಂದು ರಾತ್ರಿ ರೈಲು ಓಡಿಸಬೇಕು. ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ ಮಾಡಬೇಕು. ಹಂದಾಡಿ, ಮಟಪಾಡಿ, ನೀಲಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ ಸ್ಮಶಾನ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಸರ್ಕಾರಕ್ಕೆ ತಹಶೀಲ್ದಾರ್‌ ಮೂಲಕ ಮನವಿ ನೀಡಿದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸುಭಾಶ್ಚಂದ್ರ ನಾಯಕ್, ಕವಿರಾಜ್ ಎಸ್. ಕಾಂಚನ್, ಬ್ರಹ್ಮಾವರ ಶಾಖಾ ಕಾರ್ಯದರ್ಶಿ ರಮೇಶ ಪೂಜಾರಿ, ಮುರಳಿ, ನಳಿನಿ, ಅರವಿಂದ, ಶ್ರೀಧರ ಶೆಟ್ಟಿ, ಕೃಷ್ಣಾನಂದ ನಾಯಕ್, ಕರುಣಾಕರ, ವೆಂಕಟೇಶ, ರಿಕ್ಷಾ ಚಾಲಕರ ಸಂಘದ ಗೌರವಾಧ್ಯಕ್ಷ ರಾಜು ಪೂಜಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.