ADVERTISEMENT

ಉಡುಪಿ | ‘ಕೊರಗರಿಗೆ ಗುಣಮಟ್ಟದ ಮನೆ ನಿರ್ಮಿಸಿ’

ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:47 IST
Last Updated 24 ಸೆಪ್ಟೆಂಬರ್ 2025, 5:47 IST
ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಿತು
ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಿತು   

ಉಡುಪಿ: ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ ವಸತಿ ಕಾರ್ಯಕ್ರಮದಡಿ ಮನೆ ನಿರ್ಮಿಸಿಕೊಡಲು ಸ್ವಯಂ ಸೇವಾ ಸಂಘಗಳ ಜೊತೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಗುಣಮಟ್ಟದ ಮನೆ ನಿರ್ಮಿಸಿಕೊಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರಗ ಸಮುದಾಯದವರಿಗೆ ಪ್ರತಿ ಮನೆಗೆ ₹3.73 ಲಕ್ಷ ವೆಚ್ಚದಲ್ಲಿ 308 ಮನೆ, ಪ್ರತಿ ಮನೆಗೆ ₹4.50 ಲಕ್ಷ ವೆಚ್ಚದಲ್ಲಿ 100 ಮನೆ ಮಂಜೂರಾತಿ ಮಾಡಲಾಗಿದೆ. ಈ ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆ ನಿರ್ಮಾಣ ಕಾಮಗಾರಿ ಆಗುವುದಿಲ್ಲ. ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಸಾಕಾಗದಿದ್ದಲ್ಲಿ ಸ್ವಯಂ ಸೇವಾ ಸಂಘಗಳ ನೆರವಿನಲ್ಲಿ ಮನೆ ನಿರ್ಮಿಸಿಕೊಡಿ ಎಂದರು.

ADVERTISEMENT

ಪ್ರಧಾನಮಂತ್ರಿ ಜನ್ ಮನ್ ಯೋಜನೆಯಡಿ ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗುವ ರೀತಿಯಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಈಗಾಗಲೇ ಜಮೀನು ಮಂಜೂರು ಆಗಿದೆ. ಅವುಗಳ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. 

ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ್‌ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ 19ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ಸಮಾಧಾನಕರವಾಗಿಲ್ಲ ಎಂಬ ನಿರ್ಣಯವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ವರದಿ ನೀಡಬೇಕು ಎಂದು ಎಂಜಿನಿಯರ್‌ಗಳಿಗೆ ಅವರು ಸೂಚಿಸಿದರು.

ಕೇಂದ್ರ ಸರ್ಕಾರ ಜನರಿಗೆ ಶುದ್ಧ ನೀರು ಕುಡಿಯಬೇಕೆಂಬ ಆಶಯದೊಂದಿಗೆ ಜಲ್‌ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ₹687 ಕೋಟಿ ವೆಚ್ಚದಲ್ಲಿ 525 ಕಾಮಗಾರಿಗಳನ್ನು ಕೈಗೊಂಡಿದೆ. ಅವುಗಳಲ್ಲಿ 487 ಪೂರ್ಣಗೊಂಡಿದ್ದು, 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ 93ರಷ್ಟು ಸಾಧನೆಯಾಗಿದೆ. ಆದರೆ ಉಡುಪಿ ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಸರಿಯಾಗಿ ಆಗಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು ಈ ಕುರಿತು ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಕೊಲ್ಲೂರಿನಿಂದ ರಾಣಿ ಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅಡೆತಡೆಯಾಗಿರುವ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪರಿಹಾರ ಕಾರ್ಯವನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ವೇಗವನ್ನು ಹೆಚ್ಚಿಸುವುದರೊಂದಿಗೆ ಗುಣಮಟ್ಟದೊಂದಿಗೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಜಿಲ್ಲೆಯ ಕೆಲವು ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 196 ಮೊಬೈಲ್ ಟವರ್‌ಗಳಿದ್ದು ಅವುಗಳಲ್ಲಿ 115 ಟವರ್‌ಗಳನ್ನು 2ಜಿ ಯಿಂದ 4 ಜಿಗೆ ಉನ್ನತೀಕರಣಗೊಳಿಸಲಾಗಿದೆ. ಬಾಕಿ ಉಳಿದವುಗಳನ್ನು ಉನ್ನತೀಕರಿಸಬೇಕು ಎಂದರು.

ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಸ್ಥಳೀಯ ವಿಧಾನಸಭಾ ಸದಸ್ಯರ ಮೂಲಕ ಸೌಲಭ್ಯಗಳ ವಿತರಣೆಗೆ ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕಾರ್ಕಳ ವನ್ಯಜೀವಿ ವಿಭಾಗದ ಡಿ.ಎಫ್.ಒ. ಶಿವರಾಮ್ ಎಂ. ಬಾಬು, ಸಮಿತಿಯ ಸದಸ್ಯರು ಭಾಗವಹಿಸಿದ್ದರು.

- ಜಲ್‌ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗೊಂಡಿರುವ ಕೆಲವು ಕಾಮಗಾರಿಗಳು ಕಳಪೆ ಕೆಲವು ಅವೈಜ್ಞಾನಿಕವಾಗಿವೆ. ಇದರಿಂದ ಜನರಿಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಯಶ್‌ಪಾಲ್ ಸುವರ್ಣ ಶಾಸಕ

- ಕೊರಗ ಸಮುದಾಯದವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದೆ ಬರುವುದಿಲ್ಲ. ಅವರಿಗೆ ವಸತಿ ಸೌಲಭ್ಯ ಅಗತ್ಯವಿದೆ. ಸಂಬಂಧಪಟ್ಟ ಇಲಾಖೆಯವರು ಅವರು ಇರುವಲ್ಲಿಗೆ ಹೋಗಿ ಸೌಲಭ್ಯ ನೀಡಬೇಕು

-ಗುರುರಾಜ್ ಗಂಟಿಹೊಳೆ ಶಾಸಕ

ರಾಜ್ಯ ಸರ್ಕಾರ ಕೆಲವು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಪರಿಶೀಲನೆ ಮಾಡದೆ ರದ್ದುಪಡಿಸಿರುವುದರಿಂದ ಕೆಲವರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ

-ಕಿರಣ್ ಕುಮಾರ್ ಕೊಡ್ಗಿ ಶಾಸಕ

- ಕಟಪಾಡಿ ಜಂಕ್ಷನ್ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲು ಈಗಾಗಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಲಭ್ಯವಾಗಿದೆ. ಕಾಮಗಾರಿಗೆ ಅಗತ್ಯವಿರುವ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವುದರೊಂದಿಗೆ ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು

-ಗುರ್ಮೆ ಸುರೇಶ್ ಶೆಟ್ಟಿ ಶಾಸಕ

‘ಬೆಳೆ ವಿಮೆ: ಕಾಲಾವಧಿ ವಿಸ್ತರಿಸಿ’

ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮೂಲಕ ಅನುಷ್ಠಾನಗೊಳಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡುವುದರೊಂದಿಗೆ ಅರ್ಹ ಎಲ್ಲಾ ರೈತರಿಗೂ ಈ ಸೌಲಭ್ಯಗಳು ಸಿಗುವಂತಾಗಬೇಕು. ಹವಾಮಾನಾ ಆಧಾರಿತ ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಕನಿಷ್ಠ ಒಂದು ತಿಂಗಳ ವರೆಗೆ ಕಾಲಾವಕಾಶ ನೀಡಬೇಕು. ಆದರೆ ಜಿಲ್ಲೆಯಲ್ಲಿ ಮೂರು ದಿನಗಳು ಮಾತ್ರ ಕಾಲಾವಕಾಶ ನೀಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಕಾಲಾವಧಿ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿ.ವೈ. ರಾಘವೇಂದ್ರ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.