ADVERTISEMENT

ಉಡುಪಿ: ಏಕವಿನ್ಯಾಸ ನಕ್ಷೆ ಸಿಗದೆ ಜನರಿಗೆ ಸಂಕಷ್ಟ, ಸಂಸದರ ಅಧ್ಯಕ್ಷತೆಯಲ್ಲಿ ಸಭೆ

ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:55 IST
Last Updated 10 ಜುಲೈ 2025, 3:55 IST
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   

ಉಡುಪಿ: ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಹೊಸ ಅಧಿಸೂಚನೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿ ನೀಡಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏಕವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ. ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳನ್ನು ಅನುಮೋದನೆ ನೀಡಲೂ ಸಹ ಕಷ್ಟವಾಗುತ್ತಿದೆ. ಅದಕ್ಕೆ ಸರ್ಕಾರ ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿ ನೀಡುವ ಅಗತ್ಯವಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ಮತ್ತಿತರ ದಾಖಲೆಗಳನ್ನು ಪಡೆಯಲು ಜಿಲ್ಲೆಯ ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಜಿಲ್ಲೆಯ ಭಾಗೀದಾರರ ಸಭೆಯನ್ನು ಕರೆದು ಅವರ ಅಹವಾಲುಗಳನ್ನು ಕೇಳಿ, ಸಮಸ್ಯೆಗಳ ಪಟ್ಟಿಯನ್ನು ಮುಂದಿನ ಐದು ದಿನಗಳ ಒಳಗಾಗಿ ಮಾಡಬೇಕೆಂದು ಸೂಚನೆ ನೀಡಿದರು. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ ತಿಳಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಗರ ಯೋಜನಾ ಪ್ರಾಧಿಕಾರದಲ್ಲಿ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ ಇದ್ದರು.

ಕರಾವಳಿಯಲ್ಲಿ ಗ್ರಾಮ ಠಾಣೆಗಳು ಇಲ್ಲದೇ ಇರುವುದರಿಂದ ಸಮಸ್ಯೆ ಉದ್ಭವವಾಗುತ್ತಿದೆ. ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಿಂದ ಗೃಹ ನಿರ್ಮಾಣಕ್ಕೆ 6 ಮೀ. ಬಿಟ್ಟು ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ
ಕಿರಣ್ ಕುಮಾರ್ ಕೊಡ್ಗಿ ಶಾಸಕ

‘ಕಾರ್ಯದರ್ಶಿ ಮಟ್ಟದಲ್ಲಿ ಸಭೆ ನಡೆಯಲಿ’

ಪ್ರಾಧಿಕಾರ ಹೊಸ ಅಧಿಸೂಚನೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಿಮಾಡಿ ಕೊಡಿ. ಅದನ್ನು ಮತ್ತೊಮ್ಮೆ ಎಲ್ಲರೂ ಸೇರಿ ಚರ್ಚಿಸಿ ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣಾ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಭೆಗಳನ್ನು ಕರೆದಾಗ ಸಭೆಯ ನಡಾವಳಿ ದಾಖಲಿಸಿದ್ದಲ್ಲಿ ಮುಂದಿನ ಸಭೆಗಳಲ್ಲಿ ನಡಾವಳಿ ಆಧಾರದ ಮೇಲೆ ಸಭೆ ಮುಂದುವರೆಸಲು ಅನುಕೂಲವಾಗುತ್ತದೆ ಎಂದ ಅವರು ಕಳೆದ ಸಭೆಯ ನಡವಳಿಯನ್ನು ದಾಖಲಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.