ADVERTISEMENT

ಸಾರಿಗೆ ಮುಷ್ಕರ: ರಸ್ತೆಗಿಳಿಯಲಿವೆ ಖಾಸಗಿ ಬಸ್‌ಗಳು

ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್‌

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 14:49 IST
Last Updated 6 ಏಪ್ರಿಲ್ 2021, 14:49 IST
ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   

ಉಡುಪಿ: ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್‌ಗಳನ್ನು ಓಡಿಸಲಾಗುವುದು ಎಂದು ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಒತ್ತಾಯಿಸಿದರು.

ಮಂಗಳವಾರ ಕಚೇರಿಯಲ್ಲಿ ಮಾತನಾಡಿ, ಸರ್ಕಾರಿ ಸಾರಿಗೆ ನೌಕರರು ಮುಷ್ಕರ ನಿರ್ಧಾರದಿಂದ ಹಿಂದೆ ಸರಿಯಬೇಕು. ಮುಷ್ಕರ ನಡೆಸಿದರೆ, ಎಲ್ಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳನ್ನು ಓಡಿಸಲಾಗುವುದು ಎಂದು ಸ್ಪಷ್ಪಪಡಿಸಿದರು.

ಖಾಸಗಿ ಬಸ್‌ ಮಾಲೀಕರು ಸಮಸ್ಯೆಯಲ್ಲಿದ್ದರೂ ಮುಷ್ಕರದ ಹಾದಿ ತುಳಿಯುತ್ತಿಲ್ಲ; ಬದಲಾಗಿ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಸಾರಿಗೆ ಸಂಸ್ಥೆಗಳು ಕೂಡ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಖಾಸಗೀಕರಣಕ್ಕೆ ಒತ್ತುಕೊಡಿ:

ಕೇಂದ್ರ ಸರ್ಕಾರ ಈಚೆಗೆ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುವ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಪರವಾನಗಿ ನೀಡಲು ಅವಕಾಶ ನೀಡಿದೆ. ರಾಜ್ಯ ಸರ್ಕಾರ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಿದರೆ ಮುಷ್ಕರ, ಪ್ರತಿಭಟನೆಗಳಿಗೆ ಕಡಿವಾಣ ಹಾಕಬಹುದು. ರಾಜ್ಯದ ಬೊಕ್ಕಸಕ್ಕೆ ಹೆಚ್ಚು ತೆರಿಗೆಯೂ ಸಂಗ್ರಹವಾಗಲಿದೆ ಎಂದು ಸಲಹೆ ನೀಡಿದರು.

ಖಾಸಗಿ ಬಸ್‌ಗಳ ಮಾಲೀಕರು ಮೂರು, ಆರು ಹಾಗೂ ವರ್ಷಕ್ಕೊಮ್ಮೆ ತೆರಿಗೆ ಪಾವತಿಸುತ್ತಾರೆ. ಕೋವಿಡ್ ಸಂದರ್ಭ ತಿಂಗಳಿಗೊಮ್ಮೆ ತೆರಿಗೆ ಪಾವತಿಸಲು ಅವಕಾಶ ನೀಡಲಾಗಿತ್ತು. ಅದೇ ಮಾದರಿ ಮುಂದುವರಿಸಬೇಕು. ಸೆರೆಂಡರ್ ಮಾಡಿದ್ದ ಖಾಸಗಿ ಬಸ್‌ಗಳನ್ನು ತೆರಿಗೆ ಕಟ್ಟದೆ ಓಡಿಸಲು ಸರ್ಕಾರ ಅನುಮತಿ ನೀಡಿದ್ದು, ಇದೇರೀತಿ ಸಧ್ಯ ಸಂಚರಿಸುತ್ತಿರುವ ಖಾಸಗಿ ಬಸ್‌ಗಳಿಗೂ 2 ರಿಂದ 3 ತಿಂಗಳು ತೆರಿಗೆ ವಿನಾಯಿತಿ ನೀಡಬೇಕು ಎಂದು ಕುಯಿಲಾಡಿ ಆಗ್ರಹಿಸಿದರು.

ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಪ್ರಯಾಣಿಸುವವರಿಗೆ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡುವುದಕ್ಕೆ ಪ್ರತಿಯಾಗಿ ಸರ್ಕಾರ ಸಾರಿಗೆ ನಿಗಮಕ್ಕೆ ಅನುದಾನ ನೀಡುತ್ತಿದ್ದು, ಅದೇ ಮಾದರಿಯಲ್ಲಿ ಖಾಸಗಿ ಬಸ್‌ಗಳಿಗೂ ಕೊಡಬೇಕು. ಸ್ಟೇಜ್ ಕ್ಯಾರೇಜ್‌ ಬಸ್‌ಗಳಿಗೆ ಟೋಲ್‌ ರಿಯಾಯಿತಿ ನೀಡುವುದರ ಜತೆಗೆ, ಟ್ರಿಪ್‌ ಸಂಖ್ಯೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.

ಸುದ್ದಿಗೋಷ್ಠಿಯಲ್ಲಿ ಸಿಟಿ ಬಸ್ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್‌, ಉಪಾಧ್ಯಕ್ಷ ಸುಧಾಕರ್‌, ಖಜಾಂಚಿ ಚಂದನ್ ಒಳಕಾಡು, ನಾಗರಾಜ್ ಶೆಟ್ಟಿಗಾರ್ ಇದ್ದರು. ‘ಆತಂಕ ಬೇಡ; ಖಾಸಗಿ ಬಸ್‌ಗಳು ಓಡಲಿವೆ’

ಸಾರಿಗೆ ಮುಷ್ಕರಕ್ಕೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಎಲ್ಲ ಮಾರ್ಗಗಳಲ್ಲೂ ಖಾಸಗಿ ಬಸ್‌ಗಳು ಸಂಚರಿಸಲಿವೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 2,500 ಖಾಸಗಿ ಬಸ್‌ಗಳಿದ್ದು, ಎಲ್ಲವೂ ರಸ್ತೆಗಿಳಿಯಲಿವೆ. ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ರಾಜ್ಯ ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಖಜಾಂಚಿ ಸುರೇಶ್ ಕುಯಿಲಾಡಿ ತಿಳಿಸಿದರು.
‘ಸಿಬ್ಬಂದಿ ಲಭ್ಯತೆ ಮೇಲೆ ಬಸ್‌ಗಳ ಓಡಾಟ’

ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಕೆಆರ್‌ಆರ್‌ಟಿಸಿ ಸಿಬ್ಬಂದಿ ಲಭ್ಯತೆಯ ಆಧಾರದ ಮೇಲೆ ಎಂದಿನಂತೆ ಎಲ್ಲ ಮಾರ್ಗಗಳಲ್ಲೂ ಬಸ್‌ಗಳನ್ನು ಓಡಿಸಲಾಗುವುದು. ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವು ಮಾರ್ಗಗಳಿಗೆ ಬಸ್‌ಗಳು ಸಂಚರಿಸಲಿವೆ ಎಂದು ಉಡುಪಿ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಉದಯ್‌ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.