
ಕುಂದಾಪುರ (ಉಡುಪಿ): ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯದ ಮನೆಯಲ್ಲಿ ಬಾಗಿನ ನೀಡಿ, ವಾಸ್ತವ್ಯ ಮಾಡಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ಈಗ ದಲಿತ ದಂಪತಿಯ ಪಾದಪೂಜೆ ನೆರವೇರಿಸಿದ್ದಾರೆ.
ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆಯಂಗಡಿ ಎಸ್‌ಸಿ ಕಾಲೊನಿ ನಿವಾಸಿ ಶಶಿಕುಮಾರ್ ಅವರ ಮನೆಗೆ ಭಾನುವಾರ ರಾತ್ರಿ ಪತ್ನಿ ಅನುರಾಧಾ ಅವರೊಂದಿಗೆ ಭೇಟಿ ನೀಡಿದ ಶಾಸಕರು, ಪಾದಪೂಜೆ ಮಾಡಿ ಅವರೊಂದಿಗೆ ಸಹ ಭೋಜನ ಸವಿದರು.
ಈ ವೇಳೆ ಮಾತನಾಡಿ, ‘ಸಮಾಜದ ಸಾಮರಸ್ಯಕ್ಕೆ ಅಡ್ಡ ಗೋಡೆಯಾಗಿರುವ ಅಸ್ಪೃಶ್ಯತೆಯ ಪಿಡುಗು ದೂರವಾಗಬೇಕು. ಎಲ್ಲರೂ ಒಂದು ಎನ್ನುವ ಸಾಮರಸ್ಯದ ಭಾವನೆ ಸಾಮೂಹಿಕವಾಗಿ ಜಾಗೃತವಾಗಬೇಕು ಎನ್ನುವ ಸದುದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ದಲಿತ ಸಮುದಾಯದ ಹಿರಿಯ ದಂಪತಿಯನ್ನು ಗೌರವಿಸಲಾಯಿತು. ಊರ ಪ್ರಮುಖರು, ದಲಿತ ಸಮುದಾಯದ ಮುಖಂಡರು, ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷೆ ಅನಿತಾ ಮರವಂತೆ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.