ADVERTISEMENT

ಉಡುಪಿಯ ಪಣಿಯಾಡಿಯಲ್ಲಿ ಶಿಲಾಯುಗದ ಬೃಹತ್ ಗುಹಾ ಸಮಾಧಿ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 15:18 IST
Last Updated 1 ಏಪ್ರಿಲ್ 2021, 15:18 IST
ಉಡುಪಿ ನಗರದಿಂದ 3 ಕಿ.ಮೀ ದೂರದಲ್ಲಿರುವ ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದ ಗರ್ಭಗೃಹದ ಸಮೀಪದಲ್ಲಿ ಶಿಲಾಯುಗದ ಬೃಹತ್‌ ಗುಹಾ ಸಮಾಧಿ ಪತ್ತೆಯಾಗಿದೆ.
ಉಡುಪಿ ನಗರದಿಂದ 3 ಕಿ.ಮೀ ದೂರದಲ್ಲಿರುವ ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದ ಗರ್ಭಗೃಹದ ಸಮೀಪದಲ್ಲಿ ಶಿಲಾಯುಗದ ಬೃಹತ್‌ ಗುಹಾ ಸಮಾಧಿ ಪತ್ತೆಯಾಗಿದೆ.   

ಉಡುಪಿ: ನಗರದಿಂದ 3 ಕಿ.ಮೀ ದೂರದಲ್ಲಿರುವ ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದ ಗರ್ಭಗೃಹದ ಸಮೀಪದಲ್ಲಿ ಶಿಲಾಯುಗದ ಬೃಹತ್‌ ಗುಹಾ ಸಮಾಧಿ ಪತ್ತೆಯಾಗಿದೆ.

ನೆಲಮಟ್ಟದಿಂದ 3 ಅಡಿ ಆಳದಲ್ಲಿರುವ ಗುಹೆಗೆ ಎರಡು ಅಡಿ ಸುತ್ತಳತೆಯ ಪ್ರವೇಶದ್ವಾರವಿದೆ. ಎಂಟು ಅಡಿ ಆಳ ಮತ್ತು ಒಳಭಾಗದಲ್ಲಿ ಎಂಟು ಅಡಿ ವಿಸ್ತೀರ್ಣದಲ್ಲಿ ಅರ್ಧಗೋಲಾಕಾರದ ರಚನೆಯಲ್ಲಿದೆ. ಗುಹಾ ಸಮಾಧಿಯಲ್ಲಿ ಮಣ್ಣು ಕುಸಿದಿರುವುದರಿಂದ ಅವಶೇಷಗಳನ್ನು ಸಂಗ್ರಹಿಸಲು ಸಾದ್ಯವಾಗಿಲ್ಲ.

ಸಾಂತೂರಿನಲ್ಲಿಯೂ ಇಂತಹ ಸಮಾಧಿಯಲ್ಲಿ ಮಡಕೆ ಅವಶೇಷಗಳು ಪತ್ತೆಯಾಗಿದ್ದವು. ಪ್ರಸ್ತುತ ದೇವಾಲಯದ ಉತ್ತರ ಭಾಗದಲ್ಲಿ ಪತ್ತೆಯಾಗಿರುವ ಗುಹಾ ಸಮಾಧಿಯು ಗರ್ಭಗೃಹದಿಂದ ಕೇವಲ 8 ಅಡಿ ದೂರದಲ್ಲಿದೆ. ಪಾವಂಜೆಯ ಸುಬ್ರಹ್ಮಣ್ಯ ದೇವಾಲಯ, ಸಾಂತೂರಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಸೂಡಾದ ಸುಬ್ರಹ್ಮಣ್ಯ ದೇವಾಲಯಗಳ ಸಮೀಪದಲ್ಲಿಯೂ ಬೃಹತ್ ಶಿಲಾಯುಗದ ಗುಹಾ ಸಮಾಧಿಗಳು ಪತ್ತೆಯಾಗಿವೆ.

ADVERTISEMENT

ಪಳ್ಳಿಯ ಮದ್ಮಲ್‍ಪಾದೆಯಲ್ಲಿ ಶಿಲಾಯುಗದ ಬೃಹತ್ ಕಲ್ಮನೆ ಸಮಾಧಿಯನ್ನು ನಾಗಬ್ರಹ್ಮಸ್ಥಾನವಾಗಿ ಆರಾಧಿಸಲಾಗುತ್ತಿದೆ. ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಗುಹಾ ಸಮಾಧಿ ಫಣಿಗಳ ಮೂಲ ನಿವೇಶನದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ ಬಹುಮುಖ್ಯ ಪುರಾತತ್ವ ಸಾಕ್ಷಿಯಾಗಿದೆ. ಪಣಿಯಾಡಿಯ ದೇವಾಲಯ ಪ್ರಸ್ತುತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಆಡಳಿತಕ್ಕೊಳಪಟ್ಟಿದೆ. ಸ್ಥಳೀಯ ಅಧ್ಯಯನದಲ್ಲಿ ರಾಜೇಶ ಭಟ್ ಪಣಿಯಾಡಿ ಸಹಕರಿಸಿದ್ದಾರೆ ಎಂದು ಪುರಾತತ್ವ ತಜ್ಞ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಇತಿಹಾಸ

ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಫಣಿಗಳು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಫಣಿಯೂರು, ಪಣಿಯಾಡಿ ಎಂಬ ಹೆಸರು ಜನಾಂಗದ ಪ್ರಾಚೀನ ನೆಲೆಗಳು ಎಂಬುದರ ಸೂಚಕ. ಫಣಿಗಳು ನಾಗಾರಾಧಕರು ಮತ್ತು ನಾಗಲಾಂಛನ ಹೊಂದಿದ್ದ ಒಂದು ಜನಾಂಗ.

ಪಣಿಯಾಡಿಯ ನಾಗಾಸನ ಅನಂತ ಪದ್ಮನಾಭ ಕೂಡಾ ನಾಗಸಂಬಂಧಿ ದೇವತೆಯಾಗಿದೆ. ಪಣಿಯಾಡಿಯ ಅನಂತ ಪದ್ಮನಾಭ ಸರ್ಪದ ಸುರುಳಿಯ ಮೇಲೆ ಕುಳಿತ್ತಿದ್ದು, ತಲೆಯ ಮೇಲೆ ನಾಗನ ಕೊಡೆಯಿದೆ. ಬಲಗೈ ಅಭಯ, ಹಿಂದಿನ ಬಲಗೈಯಲ್ಲಿ ಚಕ್ರ, ಎಡಗೈ ಶಂಖ ಮತ್ತು ಎಡ ಮುಂದಿನ ಕೈ ಗಧಾಹಸ್ತವಾಗಿದೆ. ಉದ್ದನೆಯ ಕರಂಡಮುಕುಟ ಇರುವುದರಿಂದ ಶಿಲ್ಪಶಾಸ್ತ್ರದ ಪ್ರಕಾರ 14ನೇ ಶತಮಾನದ ಶಿಲ್ಪ ಎಂದು ಅಂದಾಜಿಸಬಹುದು.

ಇದೇ ಲಕ್ಷಣಗಳನ್ನು ಹೊಂದಿರುವ ಉಡುಪಿ ತಾಲ್ಲೂಕಿನ ಕೀಳಿಂಜೆಯಲ್ಲಿರುವ ಶಿಲ್ಪ 10ನೇ ಶತಮಾನದ ವಾಸುದೇವನ ಶಿಲ್ಪವಾಗಿದೆ. ಬಾದಾಮಿಯ ಗುಹೆಯಲ್ಲಿ 7ನೇ ಶತಮಾನಕ್ಕೆ ಸೇರಿದ ಕರ್ನಾಟಕದ ಅತ್ಯಂತ ಪ್ರಾಚೀನ ವಾಸುದೇವನ ಶಿಲ್ಪವಿದೆ ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.