ಬೈಂದೂರು: ಕೇಂದ್ರ ಸರ್ಕಾರ ಪ್ರೋತ್ಸಾಹಿತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು, ಮತ್ಸ್ಯ ಸಂಪತ್ತು ಅಭಿವೃದ್ದಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಇಲಾಖೆಗಳು ಗಂಭೀರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಲಜೀವನ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಪಿ.ಎಂ.ಕಿಸಾನ್, ಆಯುಷ್ಮಾನ್ ಭಾರತ್, ಆತ್ಮನಿರ್ಭರ್ ಭಾರತ್ ಪ್ಯಾಕೇಜ್, ಉಜ್ವಲಾ ಯೋಜನೆ, ಮತ್ಸ್ಯ ಸಂಪದ ಯೋಜನೆ ಮುಂತಾದ ಹಲವು ಕಾರ್ಯಕ್ರಮಗಳ ಜಿಲ್ಲಾ, ತಾಲ್ಲೂಕು ಮಟ್ಟದ ಪ್ರಗತಿ ವಿವರಗಳನ್ನು ಅಧಿಕಾರಿಗಳು ಮಂಡಿಸಿದರು.
ಜಲ್‌ಜಿವನ್ ಮಿಷನ್ ಕಾಮಗಾರಿಯ ವೇಗದ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ನಿಗದಿತ ಅವಧಿಯಲ್ಲಿ ಕಾರ್ಯ ಪೂರೈಸುವಂತೆ ಅಧಿಕಾರಿಗಳಿಗೆ ಸಂಸದ ಸೂಚಿಸಿದರು. ಜನಪ್ರತಿನಿಧಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಯೋಜನೆಗಳ ಲಾಭ ಎಲ್ಲರಿಗೂ ಸಮಾನವಾಗಿ ತಲುಪುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಯೋಜನೆಗಳ ಗುರಿ ಸಾಧನೆಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಲು ತೀರ್ಮಾನ ಕೈಗೊಳ್ಳಲಾಯಿತು.
ಶಾಸಕ ಗುರುರಾಜ ಗಂಟಿಹೊಳೆ, ಜಿಲ್ಲಾಧಿಕಾರಿ ಸ್ವರೂಪ ಕೆ.ಟಿ., ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಡಿಎಫ್‌ಒ ಗಣಪತಿ ನಾಯ್ಕ್, ಶಿವರಾಮ್, ಎಸಿ ರಶ್ಮಿ, ದಿಶಾ ಸಮಿತಿ ಸದಸ್ಯರಾದ ರಮೇಶ್ ಪೂಜಾರಿ, ಪ್ರಿಯದರ್ಶಿನಿ ಬೆಸ್ಕೂರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಳೆಗಾಲದ ಬಳಿಕ ಕಾಮಗಾರಿ: ಬೈಂದೂರು ಯಡ್ತರೆಯಿಂದ ರಾಣಿಬೆನ್ನೂರು ಸಂಪರ್ಕದ ರಾ.ಹೆ. 766 ‘ಸಿ’ಗೆ ಪ್ರಥಮ ಹಂತದಲ್ಲಿ ₹350 ಕೋಟಿಯಲ್ಲಿ ಕಾಮಗಾರಿ ನಡೆದಿದ್ದು, ದ್ವಿತೀಯ ಹಂತದ ಕಾಮಗಾರಿಗೆ ₹364 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭಿಸಲಾಗುವುದು. ಶಿರೂರಿನಿಂದ ತಲ್ಲೂರು ತನಕ 4 ಅಂಡರ್‌ಪಾಸ್ ನಿರ್ಮಾಣಕ್ಕೆ ₹120 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೊಲ್ಲೂರು– ಕೊಡಚಾದ್ರಿ ಕೇಬಲ್‌ಕಾರ್ ಯೋಜನೆಗೆ ಸ್ಥಳದ ತಕರಾರು ಬಂದ ಕಾರಣ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಮುಂದಿನ 2 ವರ್ಷಗಳಲ್ಲಿ ಇದರ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಕೊಲ್ಲೂರು ಸೇರಿದಂತೆ ಈ ಭಾಗದ ಪುಣ್ಯಕ್ಷೇತ್ರಗಳಿಗೆ ಪ್ರಸಾದ ಯೋಜನೆಯಡಿ ಟೂರಿಸಂ ಸರ್ಕ್ಯೂಟ್ ನಿರ್ಮಾಣದ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.