ADVERTISEMENT

ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು

ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ಡಾ.ನವೀನ್ ಭಟ್‌ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:23 IST
Last Updated 5 ಅಕ್ಟೋಬರ್ 2020, 14:23 IST
ಉಡುಪಿ ಜಿಲ್ಲಾ ಪಂಚಾಯಿತಿ ನೂತನ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೋಮವಾರ ಡಾ.ನವೀನ್ ಭಟ್‌ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಸಿಇಒ ಪ್ರೀತಿ ಗೆಹ್ಲೋಟ್‌ ಅಧಿಕಾರ ಹಸ್ತಾಂತರ ಮಾಡಿದರು.
ಉಡುಪಿ ಜಿಲ್ಲಾ ಪಂಚಾಯಿತಿ ನೂತನ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೋಮವಾರ ಡಾ.ನವೀನ್ ಭಟ್‌ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಸಿಇಒ ಪ್ರೀತಿ ಗೆಹ್ಲೋಟ್‌ ಅಧಿಕಾರ ಹಸ್ತಾಂತರ ಮಾಡಿದರು.   

ಉಡುಪಿ: ಜಿಲ್ಲಾ ಪಂಚಾಯಿತಿ ನೂತನ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೋಮವಾರ ಡಾ.ನವೀನ್ ಭಟ್‌ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಒ ಪ್ರೀತಿ ಗೆಹ್ಲೋಟ್‌ ಅಧಿಕಾರ ಹಸ್ತಾಂತರ ಮಾಡಿದರು.

ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ನೂತನ ಸಿಇಒ ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ಹರಡುವಿಕೆ ತಡೆಗೆ ಹೆಚ್ಚಿನ ಗಮನ ಕೊಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡಲಾಗುವುದು’ ಎಂದು ಮುಂದಿನ ಕಾರ್ಯಸೂಚಿಗಳನ್ನು ಹಂಚಿಕೊಂಡರು.

ಜಿಲ್ಲಾ ಪಂಚಾಯಿತಿಯಲ್ಲಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಜತೆಗೆ, ರಾಜ್ಯಕ್ಕೆ ಮಾದರಿಯಾಗಿರುವ ಘನ, ದ್ರವ ಸಂಪನ್ಮೂಲ ಘಟಕಗಳನ್ನು (ಎಸ್‌ಎಲ್‌ಆರ್‌ಎಂ) ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಕ್ಕೆ ತರುವುದು, ಪಂಚಾಯಿತಿಗಳಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಜಾರಿಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

2 ವಾರಗಳಲ್ಲಿ ಜಿಲ್ಲೆಯಲ್ಲಿ ಆಗಬೇಕಾದ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಕಲೆಹಾಕಿ ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಕೋವಿಡ್‌ ಕಾರ್ಯದೊತ್ತಡ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನ ಸಂಬಂಧ ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಕೆಲಸ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಡಾ.ನವೀನ್ ಭಟ್‌ ಮೂಲತಃ ಮುರ್ಡೇಶ್ವರದವರು. ಎಂಬಿಬಿಎಸ್‌ ಪದವೀಧರರಾಗಿರುವ ಅವರು, ಯುಪಿಎಸ್‌ಸಿ ಪರೀಕ್ಷೆಯಲ್ಲಿ 37ನೇ ರ‍್ಯಾಂಕ್‌ ಪಡೆದು 2017ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾದರು. ಬಳಿಕ ರಾಯಚೂರು ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ, ಆರೋಗ್ಯ ಮಂತ್ರಾಲಯದಲ್ಲಿ ಅಧಿಕಾರಿಯಾಗಿ, ಹಾಸನದಲ್ಲಿ 11 ತಿಂಗಳು ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಉಡುಪಿಯಲ್ಲಿ ಕುಲದೇವರಿದ್ದು ಜಿಲ್ಲೆಯ ಜತೆಗೆ ಕುಟುಂಬದ ಧಾರ್ಮಿಕ ನಂಟಿದೆ ಎಂದು ಡಾ.ನವೀನ್ ಭಟ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.