
ಉಡುಪಿ: ಮಕ್ಕಳ ರಕ್ಷಣೆಗಾಗಿ ಅನುಷ್ಠಾನಗೊಳಿಸಲಾದ ಕಾಯ್ದೆ, ಕಾರ್ಯಕ್ರಮಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ತಮಗಿರುವ ಸಾಮಾಜಿಕ ಹೊಣೆಗಾರಿಕೆಯನ್ನು ಮನಗಂಡು, ಅವುಗಳನ್ನು ತಳ ಹಂತದಿಂದಲೇ ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಂರಕ್ಷಣೆಯ ವಿಶೇಷ ಕಾಯ್ದೆಗಳಾದ ಪೊಕ್ಸೊ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲ್ಯ ವಿವಾಹ ನಿಷೇಧ, ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಪತ್ತೆ ನಿಷೇಧ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಗ್ರಾಮ ಮಟ್ಟದ ಸಮಿತಿಯ ಉದ್ದೇಶಗಳನ್ನು ಅರ್ಥೈಸಿಕೊಂಡು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಯಾವುದೇ ಕಾಯ್ದೆಗಳನ್ನು ಅನುಷ್ಠಾನ ಮಾಡುವಾಗ ನಿರ್ಲಕ್ಷ್ಯ ತೋರದೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಜಿ. ಹುಬ್ಬಳ್ಳಿ ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ರಕ್ಷಣಾ ಕೆಲಸಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅನುರಾಧ ಹಾದಿಮನಿ ಮಾತನಾಡಿದರು. ಮಕ್ಕಳ ಸಂರಕ್ಷಣಾ ಯೋಜನೆ ಯೂನಿಸೆಫ್ ಕೊಪ್ಪಳ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್ ಅವರು ಗ್ರಾಮ ಮಟ್ಟದಲ್ಲಿ ರಕ್ಷಣಾ ಸಮಿತಿಗಳನ್ನು ಬಲವರ್ಧನೆ ಮಾಡುವ ಕುರಿತು ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ್, ಅಂಗನವಾಡಿ ಮೇಲ್ವಿಚಾರಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿದರು. ಸುರಕ್ಷಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.