ಉಡುಪಿ: ಮಕ್ಕಳು ಮಾನಸಿಕವಾಗಿ ಸದೃಢರಾದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ತಿಳಿಸಿದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಕ್ಕಳ ರಂಗಶಿಬಿರ ‘ಕೊಂಡಾಟ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಲೋಕದಲ್ಲಿ ಕಳೆದು ಹೋಗುತ್ತಿದ್ದಾರೆ. ಅವರು ಮಾನಸಿಕವಾಗಿ ಬಲಿಷ್ಠಗೊಳ್ಳಬೇಕಾದರೆ, ಸಮಾಜದೊಂದಿಗೆ ಹೊಂದಿಕೊಳ್ಳಬೇಕಾದರೆ ಇಂತಹ ಶಿಬಿರಗಳು ಅಗತ್ಯ ಎಂದು ಪ್ರತಿಪಾದಿಸಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ರವಿರಾಜ ಹೆಗ್ಡೆ ಅವರನ್ನು ಸುಮನಸಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಪತ್ರಕರ್ತ ನಾಗರಾಜ್ ವರ್ಕಾಡಿ ಮಾತನಾಡಿದರು. ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಯಶೋಧರ್ ಸಾಲಿಯಾನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್, ಕೊಂಡಾಟದ ನಿರ್ದೇಶಕ ಅಕ್ಷತ್ ಅಮೀನ್, ರಂಗನಿರ್ದೇಶಕ ದಿವಾಕರ ಕಟೀಲ್ ಇದ್ದರು.
ರಾಧಿಕಾ ದಿವಾಕರ್ ನಿರೂಪಿಸಿದರು. 25 ದಿನ ರಂಗ ಶಿಬಿರ ನಡೆದಿತ್ತು. ಶಿಬಿರಾರ್ಥಿಗಳಿಂದ ‘ಝಂ ಝಂ ಆನೆ’ ಮತ್ತು ‘ಪುಟ್ಟ’ ನಾಟಕ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.