ADVERTISEMENT

ಕ್ರಿಸ್‌ಮಸ್‌ ಹಬ್ಬ: ಎಲ್ಲೆಲ್ಲೂ ಸಂಭ್ರಮ

ನಗರದಲ್ಲಿ ಕೇಕ್‌, ಸಿಹಿತಿನಿಸು ಖರೀದಿ ಭರಾಟೆ: ಅಲಂಕಾರಗೊಂಡಿವೆ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:52 IST
Last Updated 24 ಡಿಸೆಂಬರ್ 2025, 6:52 IST
ಕ್ರಿಸ್‌ಮಸ್‌ ಅಂಗವಾಗಿ ಉಡುಪಿಯ ಶೋಕ ಮತಾ ಚರ್ಚ್‌ಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು
ಕ್ರಿಸ್‌ಮಸ್‌ ಅಂಗವಾಗಿ ಉಡುಪಿಯ ಶೋಕ ಮತಾ ಚರ್ಚ್‌ಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು   

ಉಡುಪಿ: ದೇವಪುತ್ರ ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಸಿದ್ಧತೆ ನಡೆದಿದೆ.

ಹಬ್ಬದ ಪೂರ್ವಭಾವಿಯಾಗಿ ಈಗಾಗಲೇ ವಿವಿಧ ಕಾರ್ಯಕ್ರಮಗಳು ನಡೆದಿವೆ. ವಿವಿಧ ಚರ್ಚ್‌ಗಳಲ್ಲಿ, ಕ್ರೈಸ್ತ ಬಾಂಧವರ ಮನೆಗಳಲ್ಲಿ ಕ್ರಿಸ್ಮಸ್‌ ಟ್ರೀ ನೆಟ್ಟು ಅಲಂಕಾರ ಮಾಡಲಾಗಿದೆ.

ಯೇಸು ಕ್ರಿಸ್ತರ ಜನನ ವೃತ್ತಾಂತವನ್ನು ಬಿಂಬಿಸುವ ಬಗೆ ಬಗೆಯ ಗೋದಲಿಗಳೂ ನಿರ್ಮಾಣಗೊಂಡಿವೆ. ಚರ್ಚ್‌ಗಳಲ್ಲಿ ಬೃಹದಾಕಾರದ ಗೋದಲಿಗಳನ್ನು ನಿರ್ಮಿಸಿದರೆ, ಮನೆಗಳಲ್ಲೂ ಸಣ್ಣ ಗೋದಲಿಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಪ್ರತಿವರ್ಷವೂ ಕ್ರಿಸ್‌ಮಸ್‌ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ.

ADVERTISEMENT

ಕಾರ್ಕಳದ ಅತ್ತೂರು ಸೇಂಟ್‌ ಲಾರೆನ್ಸ್‌ ಬೆಸಿಲಿಕಾ, ಪೆರಂಪಳ್ಳಿ ಫಾತಿಮಾ ಮಾತೆಯ ಚರ್ಚ್‌, ಸಾಸ್ತಾನ ಸೇಂಟ್‌ ಆ್ಯಂಟನಿ ದೇವಾಲಯ, ಶಿರ್ವ ಆರೋಗ್ಯ ಮಾತಾ ಚರ್ಚ್‌, ಬೈಂದೂರು ಹೋಳಿ ಕ್ರಾಸ್ ಚರ್ಚ್‌, ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಹಬ್ಬ ಆಚರಣೆಗೆ ಭರದ ಸಿದ್ಧತೆಗಳು ನಡೆದಿವೆ.

ಕ್ರೈಸ್ತ ಸಮುದಾಯದವರು ಇರುವ ಪ್ರದೇಶಗಳಲ್ಲಿ ಪ್ರತಿದಿನ ಮೆರವಣಿಗೆ ತೆರಳಿ ಏಸುವಿನ ಜೀವನ ವೃತ್ತಾಂತ ತಿಳಿಸಲಾಗುತ್ತಿದೆ. ಕರೋಲ್‌ ಗಾಯನವು ನಡೆಯುತ್ತಿದೆ.

ಕ್ರಿಸ್‌ಮಸ್‌ ಹಬ್ಬದ ಮುನ್ನದಿನವಾದ ಬುಧವಾರ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ ಈವ್ ಹಬ್ಬವನ್ನು ಆಚರಿಸಲಿದ್ದು,  ಅಂದು ರಾತ್ರಿ ಕ್ರೈಸ್ತರು ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿದ ಉಡುಪಿಯ ಯುಬಿಎಂ ಚರ್ಚ್

ಹಬ್ಬದ ಖರೀದಿ ಜೋರು

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ನಗರದ ವಿವಿಧ ಅಂಗಡಿಗಳಲ್ಲಿ ನಕ್ಷತ್ರ ವಿದ್ಯುತ್‌ ದೀಪ ಅಲಂಕಾರದ ವಸ್ತುಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು. ಹಬ್ಬದ ಸಂದರ್ಭದಲ್ಲಿ ಕ್ರೈಸ್ತರು ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರಿ ಸ್ಥಾಪಿಸಿ ಅದಕ್ಕೆ ಅಲಂಕಾರ ಮಾಡುತ್ತಾರೆ. ಅದಕ್ಕೆ ಬೇಕಾದ ಅಲಂಕಾರ ವಸ್ತುಗಳನ್ನು ಖರೀದಿಸಲು ಗ್ರಾಹಕರು ಅಂಗಡಿಗಳಿಗೆ ಮುಗಿ ಬಿದ್ದಿದ್ದರು. ₹100ರಿಂದ ₹1000 ವರೆಗಿನ ಬೆಲೆಯ ನಕ್ಷತ್ರಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಬೇಕರಿಗಳಲ್ಲಿ ಪ್ಲಮ್‌ ಕೇಕ್‌ ಸೇರಿದಂತೆ ವಿವಿಧ ಬಗೆಯ ಕೇಕ್‌ಗಳು ಸಿಹಿ ತಿನಿಸುಗಳನ್ನು ಮಾರಾಟಕ್ಕಿರಿಸಲಾಗಿದೆ. ಮೇಣದ ಬತ್ತಿಯ ಮಾರಾಟವೂ ಜೋರಾಗಿ ನಡೆದಿದೆ.

ಇಂದು ಬಲಿಪೂಜೆ

ಕ್ರಿಸ್‌ಮಸ್ ಆಚರಣೆಯ ಪ್ರಯುಕ್ತ ಇದೇ 24 ರಂದು ಸಂಜೆ ಕ್ರಿಸ್‌ಮಸ್ ಈವ್ ಬಲಿಪೂಜೆಗಳು ಉಡುಪಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಜರುಗಲಿವೆ. ಕ್ರಿಸ್‌ಮಸ್ ಈವ್ ವಿಶೇಷ ಬಲಿಪೂಜೆಯನ್ನು ಉಡುಪಿ ಕೆಥೊಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ರಾತ್ರಿ 7.30 ಕ್ಕೆ ಆರ್ಪಿಸಲಿದ್ದಾರೆ. ಬಲಿಪೂಜೆಗೆ ಮುನ್ನ 7 ಗಂಟೆಗೆ ಸರಿಯಾಗಿ ಕ್ರಿಸ್‌ಮಸ್ ಕ್ಯಾರಲ್ಸ್ ನಡೆಯಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.