ADVERTISEMENT

‘ಎಲ್ಲರಲ್ಲೂ ತ್ಯಾಗ ಮನೋಭಾವ ಇರಲಿ’

ಕೋಟೇಶ್ವರ ಸ್ವಚ್ಛ ಭಾರತ್ ಅಭಿಯಾನದ ರಥಾಲಯ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:18 IST
Last Updated 12 ಡಿಸೆಂಬರ್ 2025, 4:18 IST
ಕುಂದಾಪುರ ಸಮೀಪದ ಕೋಟೇಶ್ವರದ ಕೆಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ 24 ಸರ್ಕಾರಿ ಶಾಲಾ ಸ್ವಚ್ಛತೆಗೆ ನೀಡಲಾದ ಸ್ವಚ್ಛ ಭಾರತ್ ಅಭಿಯಾನ ರಥಾಲಯ ಲೋಕಾರ್ಪಣೆ ನಡೆಯಿತು
ಕುಂದಾಪುರ ಸಮೀಪದ ಕೋಟೇಶ್ವರದ ಕೆಪಿಎಸ್ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ 24 ಸರ್ಕಾರಿ ಶಾಲಾ ಸ್ವಚ್ಛತೆಗೆ ನೀಡಲಾದ ಸ್ವಚ್ಛ ಭಾರತ್ ಅಭಿಯಾನ ರಥಾಲಯ ಲೋಕಾರ್ಪಣೆ ನಡೆಯಿತು   

ಕುಂದಾಪುರ: ಸಂಪಾದನೆ ಮಾಡಿದ ಸಂಪತ್ತು ರಕ್ಷಿಸುವುದರ ಜತೆಗೆ ತ್ಯಾಗ ಮನೋಭಾವವನ್ನು ಇರಿಸಿಕೊಂಡಾಗ ಮಾತ್ರ ಜೀವನದ ಸಾರ್ಥಕತೆ ದೊರಕುತ್ತದೆ ಎಂದು ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ರಘುವರೇಂದ್ರ ತೀರ್ಥರು ಹೇಳಿದರು.

ಕೋಟೇಶ್ವರದ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂದಿರದಲ್ಲಿ ಗುರುವಾರ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಮೂಲಕ ಕೋಟೇಶ್ವರ ವ್ಯಾಪ್ತಿಯ 24 ಸರ್ಕಾರಿ ಶಾಲೆಗಳ ಶೌಚಾಲಯದ ಸ್ವಚ್ಛತೆಗೆ ನೀಡಲಾದ ಸ್ವಚ್ಛ ಭಾರತ್ ಅಭಿಯಾನ ರಥಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ಗಳಿಸಿದ ಧನ, ಜ್ಞಾನ ಸಂಪತ್ತು ಅದರ ಸಮರ್ಪಕ ವಿನಿಯೋಗ ಮಾಡಿದರೆ, ಅದರಿಂದಲೇ ನಮಗೆ ನಿಜವಾದ ರಕ್ಷಣೆ ದೊರೆಯುತ್ತದೆ. ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಶುದ್ಧತೆಯಲ್ಲಿಡುವ ಗೋಪಾಡಿ ಶ್ರೀನಿವಾಸ ರಾಯರ ಕಲ್ಪನೆಯೇ ಅದ್ಭುತ. ಇದು ಎಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.

ADVERTISEMENT

ರಥಾಲಯಕ್ಕೆ ಹಸಿರು ನಿಶಾನೆ ತೋರಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸ್ವಚ್ಛ ಭಾರತ್‌ ಕಾರ್ಯಕ್ರಮದ ಮೂಲ ಉದ್ದೇಶವನ್ನು ಸವಾಲಾಗಿ ಆಗಿ ಸ್ವೀಕರಿಸಿ, ಮಾದರಿಯಾಗಿ ಕೋಟೇಶ್ವರ ವಲಯದ 24 ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆಗೆ ಮುಂದಾಗಿರುವ ಗೋಪಾಡಿ ಶ್ರೀನಿವಾಸ ರಾವ್ ಇವರ ಕಾರ್ಯ ಅಭಿನಂದನೀಯ ಎಂದರು.

ಪ್ರತಿಷ್ಠಾನದ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, ಭವಿಷ್ಯದ ಆಸ್ತಿಯಾದ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದಾಗ ಮಾತ್ರ ಸ್ವಚ್ಛ ಭಾರತದ ಕನಸು ಈಡೇರುತ್ತದೆ. ಸ್ವಚ್ಛತೆಯಿಂದ ಇದ್ದಾಗ ಮಾತ್ರ ಉಲ್ಲಾಸದ ಜೀವನ ಸಾಧ್ಯ. ಸ್ವಚ್ಛತೆಯಿಂದ ಸೋಂಕು ನಿವಾರಿಸಬಹುದು. ಈ ಮಾದರಿ ಕಾರ್ಯವನ್ನು ಇಡೀ ದೇಶಕ್ಕೆ ವಿಸ್ತರಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ನನ್ನಂತೆಯೇ ಇರುವ ಇತರ ದಾನಿಗಳಿಗೂ ಈ ಯೋಜನೆ ಸ್ಫೂರ್ತಿಯಾಗಲಿ ಎಂದರು.

ಹಿರಿಯ ಬಿ.ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರಡೇಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸಿ., ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉಪನ್ಯಾಸಕ ಎಚ್.ಬಿ.ಮಂಜುನಾಥ, ಸಮಾಜ ಸೇವಕ ಎಚ್.ರಾಮಚಂದ್ರ ವರ್ಣ, ಗೋಪಾಡಿ ರುಕ್ಮಿಣಿ, ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಅಧ್ಯಕ್ಷ ಗೋಪಾಡಿ ಸಂತೋಷ್, ಖಜಾಂಚಿ ಮಹೇಶ್ ಹತ್ವಾರ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಪ್ರತಿಷ್ಠಾನದ ಟ್ರಸ್ಟಿಗಳು ಪಾಲ್ಗೊಂಡಿದ್ದರು.

ಸೇವಾ ಕಾರ್ಯಕರ್ತರು ಹಾಗೂ ಸಮಾಜ ಸೇವಕರನ್ನು ಗೌರವಿಸಲಾಯಿತು. ಅಕಾಶವಾಣಿ ಕಲಾವಿದ ವಿನುಷ್ ಭಾರದ್ವಾಜ್ ಮತ್ತು ಬಳಗದವರಿಂದ ಗಾನ ಮಾಧುರ್ಯ ಮತ್ತು ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಟ್ರಸ್ಟಿ ಸುಹಾಸ್ ಉಪಾಧ್ಯ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಮೃತ್ ಕುಮಾರ್ ತೌಳ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.