
ಉಡುಪಿ: ಜಿಲ್ಲೆಯ ಸಿಎನ್‌ಜಿ ವಿತರಣಾ ಕೇಂದ್ರಗಳಲ್ಲಿ ವಾಹನಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಟೊ ರಿಕ್ಷಾ ಸೇರಿದಂತೆ ವಿವಿಧ ವಾಹನಗಳು ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಿಎನ್‌ಜಿ ಬಳಸುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಸಿಎನ್‌ಜಿ ಪೂರೈಸಬೇಕು ಎಂದು ಅದಾನಿ ಕಂಪನಿ ಪ್ರತಿನಿಧಿಗೆ ಸೂಚಿಸಿದರು.
ಮಂಗಳೂರಿನ ಗ್ಯಾಸ್ ಡಿಪೊದಲ್ಲಿ ಟ್ಯಾಂಕರ್‌ಗಳಿಗೆ ಗ್ಯಾಸ್ ತುಂಬಿಸುವಾಗ ಉಡುಪಿ ಜಿಲ್ಲೆಯ ವಾಹನಗಳಿಗೆ ಸರತಿ ಸಾಲಿನ ಪ್ರಕಾರ ಗ್ಯಾಸ್ ತುಂಬಿಸಲು ಆದ್ಯತೆ ನೀಡಬೇಕು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಸಿಎನ್‌ಜಿ ಅಸಮರ್ಪಕ ವಿತರಣೆಯಿಂದಾಗಿ ಚಾಲಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಸಮರ್ಪಕ ವಿತರಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಅದಾನಿ ಕಂಪನಿಯವರು ಸ್ವಂತ ಗ್ಯಾಸ್ ಡಿಪೊವನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಕಳೆದ ಸಭೆಯಲ್ಲಿ ತಿಳಿಸಿದ್ದರು. ಆದರೆ ಅದು ಆಗಿಲ್ಲ. ಆ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಪ್ರಸ್ತುತ 17 ಗ್ಯಾಸ್ ಟ್ಯಾಂಕರ್ ವಾಹನಗಳಲ್ಲಿ ಮಂಗಳೂರಿನಿಂದ ಸಿಎನ್‌ಜಿ ತರಲಾಗುತ್ತಿದೆ. ಈ ವಾಹನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿದ್ದಲ್ಲಿ ಸಿಎನ್‌ಜಿಯ ಸುಗಮ ಸರಬರಾಜಿಗೆ ಅನುಕೂಲವಾಗಲಿದೆ. ಅದಕ್ಕೆ ಅದಾನಿ ಕಂಪನಿಯವರು ಒತ್ತು ನೀಡಬೇಕು ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಗೇಲ್ ಗ್ಯಾಸ್ ಹಾಗೂ ಅದಾನಿ ಗ್ಯಾಸ್ ಕಂಪನಿ ಮುಖ್ಯಸ್ಥರು, ಆಟೊ ರಿಕ್ಷಾ ಚಾಲಕರು ಭಾಗವಹಿಸಿದ್ದರು.
ಗೇಲ್ ಗ್ಯಾಸ್ ಕಂಪನಿ ಹಾಗೂ ಅದಾನಿ ಕಂಪನಿಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಿಎನ್‌ಜಿ ವಿತರಣೆಯಲ್ಲಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.