ADVERTISEMENT

‘ಸೌಹಾರ್ದತೆಗೆ ಒಗ್ಗಟ್ಟು ಅಗತ್ಯ’

ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:05 IST
Last Updated 11 ಡಿಸೆಂಬರ್ 2025, 4:05 IST
ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಬಲಿಪೂಜೆ ನೆರವೇರಿತು
ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಬಲಿಪೂಜೆ ನೆರವೇರಿತು   

ಉಡುಪಿ: ‘ಪರಸ್ಪರ ಒಗ್ಗಟ್ಟಿನಿಂದ ಧರ್ಮಸಭೆಯ ಅಭಿವೃದ್ಧಿಗೆ ಶ್ರಮಿಸಿದಾಗ ಬಲಿಷ್ಠ ಸೌಹಾರ್ದಯುತ ಸಮುದಾಯ ನಿರ್ಮಾಣ ಸಾಧ್ಯವಿದೆ’ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಜೈ ಚರ್ಚ್‌ ಪ್ರಧಾನ ಧರ್ಮಗುರು ಜೆ.ಬಿ. ಸಲ್ಡಾನಾ ಹೇಳಿದರು.

ಮಲ್ಪೆಯ ತೊಟ್ಟಂ ಸೇಂಟ್ ಅನ್ನಮ್ಮ ದೇವಾಲಯದಲ್ಲಿ ಬುಧವಾರ ನಡೆದ ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆ ನೆರವೇರಿಸಿ ಅವರು ಸಂದೇಶ ನೀಡಿದರು.

‘ಭರವಸೆಯ ಸಮುದಾಯದ ನಿರ್ಮಾಣದಲ್ಲಿ ದೇವರು ಮತ್ತು ಮಾನವನ ನಡುವಿನ ಸಂಬಂಧ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರು ಒಂದಾಗಿ ದೈವಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿದಾಗ ಶಾಂತಿ ಮತ್ತು ಪ್ರೀತಿಯುತ ಸಮಾಜ ನಿರ್ಮಾಣವಾಗುತ್ತದೆ’ ಎಂದರು.

ADVERTISEMENT

ಮಹೋತ್ಸವಕ್ಕೆ ಸಹಕರಿಸಿದ ದಾನಿಗಳಿಗೆ ಮೇಣದ ಬತ್ತಿ ಗೌರವವನ್ನು ಪ್ರಧಾನ ಧರ್ಮಗುರು ಸಲ್ಲಿಸಿದರು. ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಚರ್ಚ್‌ನ ಪ್ರಧಾನ ಧರ್ಮಗುರು ಡೆನಿಸ್ ಡೆಸಾ, ಕಲ್ಯಾಣಪುರ ವಲಯ ಹಾಗೂ ಧರ್ಮಪ್ರಾಂತ್ಯ ವ್ಯಾಪ್ತಿಯ ವಿವಿಧ ಚರ್ಚ್‌ಗಳ ಧರ್ಮಗುರುಗಳು ಭಾಗಿಯಾಗಿದ್ದರು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತ, ಸ್ಥಳೀಯ ಕಾನ್ವೆಂಟಿನ ಸಿಸ್ಟರ್ ಸುಷ್ಮಾ, 20 ಆಯೋಗಗಳ ಸಂಚಾಲಕಿ ವನಿತಾ ಫೆರ್ನಾಂಡಿಸ್ ಭಾಗವಹಿಸಿದ್ದರು.

ಮಂಗಳವಾರ ಸಂಜೆ ನಡೆದ ದೈವ ವಾಕ್ಯದ ಆರಾಧನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಿನ್ಸೆಂಟ್ ಸಿಕ್ವೇರ ನೆರವೇರಿಸಿದ್ದರು. ದೈವವ್ಯಾಕ್ಯದ ಆರಾಧನೆ ಪ್ರಯುಕ್ತ ತೊಟ್ಟಂ ಗಣೇಶೋತ್ಸವ ಸಮಿತಿ ವೇದಿಕೆಯಿಂದ ಚರ್ಚ್‌ವರೆಗೆ ಮೆರವಣಿಗೆ ನಡೆದಿದ್ದು, ತೊಟ್ಟಂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಸಹಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.