ADVERTISEMENT

ಕೊಕ್ಕರ್ಣೆ | ಕಷ್ಟ ಸುಖ ಹಂಚಿಕೊಳ್ಳಲು ವಾರದ ಸಭೆ ಸಹಕಾರಿ: ಆನಂದ ಸುವರ್ಣ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:19 IST
Last Updated 20 ಜನವರಿ 2026, 2:19 IST
ಸೂರಾಲು ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ತಿಲಕ್ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಸೂರಾಲು ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ತಿಲಕ್ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಕೊಕ್ಕರ್ಣೆ (ಬ್ರಹ್ಮಾವರ): ಇಂದು ಕೂಡು ಕುಟುಂಬ ಕಡಿಮೆ ಯಾಗಿದ್ದು, ಎಲ್ಲೆಡೆ ವಿಭಕ್ತ ಕುಟುಂಬ ನೋಡುತ್ತಿದ್ದೇವೆ. ಕುಟುಂಬದ ಮಾತ್ರವಲ್ಲದೆ ಮನಸ್ಸು ಕೂಡ ವಿಭಜನೆಯಾಗಿದೆ. ಸಂಘದಲ್ಲಿರುವ ಸದಸ್ಯರನ್ನು ಅಕ್ಕ– ತಂಗಿಯರಂತೆ ನೋಡುವುದರಿಂದ ಕಷ್ಟ ಸುಖ ಹಂಚಿಕೊಳ್ಳಲು ವಾರದ ಸಭೆ ಸಹಕಾರಿಯಾಗುತ್ತದೆ ಎಂದು ‍ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗ ನಿರ್ದೇಶಕ ಆನಂದ ಸುವರ್ಣ ಹೇಳಿದರು.

ಅವರು ಯೋಜನೆಯ ಕೊಕ್ಕರ್ಣೆ ವಲಯದ ಒಕ್ಕೂಟದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರ ಯೋಜನೆಗಳಿಂತ ಸದಸ್ಯರ ಬಗ್ಗೆ ಹೆಚ್ಚಾಗಿ ಮಾತನಾಡುತ್ತದೆ. ಸಂಘಗಳನ್ನು ಸುಸ್ಥಿರವಾಗಿ ಇಟ್ಟುಕೊಂಡರೆ ಕಷ್ಟದ ಸಂದರ್ಭ ಬೇರೆಯವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಇರುವುದಿಲ್ಲ. ಸ್ವಾಭಿಮಾನದಿಂದ ಸಂಘದಲ್ಲಿ ಆರ್ಥಿಕ ವ್ಯವಹಾರ ಮಾಡಬಹುದು. ಸಂಘವು ಬೇಡಿದ್ದನ್ನು ಕೊಡುವ ಕಾಮಧೇನು ಆಗಬಹುದು. ಚೆನ್ನಾಗಿ ಪೋಷಿಸುವ ಕೆಲಸ ಆಗಬೇಕು ಎಂದರು.

ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ನೀಡಬೇಕು. ಗ್ರಾಮಾಭಿವೃದ್ಧಿ ಯೋಜನೆ ಹಲವು ಕಾರ್ಯಕ್ರಮಗಳ ಗೊಂಚಲಾಗಿ ಕೆಲಸ ಮಾಡುತ್ತಿದೆ. ಯೋಜನೆಯಿಂದ ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗುತ್ತಿದೆ. ಅಶಕ್ತರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ. ರಾಜ್ಯದಲ್ಲಿ 5 ಸಾವಿರ ಜ್ಞಾನವಿಕಾಸ ಕೇಂದ್ರಗಳಿದ್ದು, ಮಹಿಳೆಯರಿಗೆ ಮಾಹಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 55 ಲಕ್ಷ ಜನ ಯೋಜನೆಯ ಸದಸ್ಯರಾಗಿದ್ದಾರೆ ಎಂದರು.

ADVERTISEMENT

ಸೂರಾಲು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎನ್‌. ತಿಲಕ್‌ ಪ್ರಸಾದ್ ಜೀ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ವಲಯಾಧ್ಯಕ್ಷೆ ಸುಜಾತ ಶೆಟ್ಟಿ ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳ ಅನುಭವ ಹಂಚಿಕೊಂಡು, ನೂತನ ಪದಾಧಿಕಾರಿಗಳಿಗೆ ಶುಭಕೋರಿದರು. ಶೌರ್ಯ ಘಟಕದ ಸದಸ್ಯರಿಗೆ ಬ್ಯಾಗ್ ವಿತರಿಸಲಾಯಿತು.

ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಭುಜಂಗ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ಹರೀಶ ಶ್ಯಾನುಭಾಗ್‌, ಕೊಕ್ಕರ್ಣೆ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಸಂಜೀವ ಮಾಸ್ಟರ್, ತಾಲ್ಲೂಕು ಭಜನಾ ಮಂಡಳಿ ಕಾರ್ಯದರ್ಶಿ ಸುರೇಂದ್ರ ಕುಮಾರ್, ಶೌರ್ಯ ಘಟಕದ ಜೀವನ್ ಪೂಜಾರಿ, ಪುಟ್ಟಯ್ಯ ನಾಯ್ಕ ಭಾಗವಹಿಸಿದ್ದರು.

ಎಸ್‌ಕೆಡಿಆರ್‌ಡಿಪಿ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ. ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಗಣೇಶ ವಲಯದ ಸಾಧನಾ ವರದಿ ವಾಚಿಸಿದರು. ಸೇವಾ ಪ್ರತಿನಿಧಿ ಯಶೋದಾ ವಂದಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.