ADVERTISEMENT

ಕುಂದಾಪುರ: ಕೊಡ್ಗಿಯವರಿಗೆ ನುಡಿ-ನಮನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 3:22 IST
Last Updated 27 ಜೂನ್ 2022, 3:22 IST
ಕುಂದಾಪುರ ಸಮೀಪದ ಅಮಾಸೆಬೈಲಿನ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ಹಿರಿಯ ಮುತ್ಸದ್ದಿ ಎ.ಜಿ ಕೊಡ್ಗಿಯವರ ವೈಕುಂಠ ಸಮಾರಾಧನೆಯ ಅಂಗವಾಗಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ‌ ಭಟ್ ದೀಪ ಜ್ಯೋತಿ ಬೆಳಗಿದರು. ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣಕುಮಾರ ಕೊಡ್ಗಿ ಇದ್ದರು.
ಕುಂದಾಪುರ ಸಮೀಪದ ಅಮಾಸೆಬೈಲಿನ ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ಹಿರಿಯ ಮುತ್ಸದ್ದಿ ಎ.ಜಿ ಕೊಡ್ಗಿಯವರ ವೈಕುಂಠ ಸಮಾರಾಧನೆಯ ಅಂಗವಾಗಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ‌ ಭಟ್ ದೀಪ ಜ್ಯೋತಿ ಬೆಳಗಿದರು. ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣಕುಮಾರ ಕೊಡ್ಗಿ ಇದ್ದರು.   

ಕುಂದಾಪುರ: ಸೂರ್ಯನ ಪ್ರಭೆಯಂತೆ ತಾನು ಸೇವೆ ಸಲ್ಲಿಸಿದ ಕ್ಷೇತ್ರಗಳಲ್ಲಿ ಬದ್ಧತೆಯನ್ನು ಉಳಿಸಿಕೊಂಡವರು ಕೊಡ್ಗಿಯವರು. ಎಷ್ಟೇ ಉನ್ನತ ಹುದ್ದೆಗೇರಿದರೂ ಕೂಡ ತನ್ನೂರ ಅಭಿವೃದ್ದಿ ಮರೆತವರಲ್ಲ. ಅಮಾಸೆಬೈಲಿನಂತಹ ಕತ್ತಲೆಯ ಕುಗ್ರಾಮಕ್ಕೆ ಸೂರ್ಯನ ಶಕ್ತಿಯಿಂದ ಬೆಳಕನ್ನು ಹರಿಸಿ ಹುಣ್ಣಿಮೆಯ ಪೂರ್ಣ ಚಂದಿರನ ರೂಪ ಕೊಟ್ಟ ಛಲವಂತ ಅವರಾಗಿದ್ದರು ಎಂದು ಆರ್‌ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ‌ ಭಟ್ ಹೇಳಿದರು.

ಇಲ್ಲಿನ‌ ಅಮಾಸೆಬೈಲಿನ ಪ್ರೌಢ ಶಾಲಾ ವಠಾರದಲ್ಲಿ ಭಾನುವಾರ ಹಿರಿಯ ಮುತ್ಸದ್ದಿ ಎ.ಜಿ ಕೊಡ್ಗಿಯವರ ವೈಕುಂಠ ಸಮಾರಾಧನೆಯ ಅಂಗವಾಗಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕೊಡ್ಗಿಯವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು.

ಸಿದ್ಧಾಂತ ಹಾಗೂ ಬದ್ಧತೆಗಾಗಿ ನಿಷ್ಠುರವಾದ ನಡೆ-ನುಡಿಯನ್ನು ಹೊಂದಿದ್ದ ಅವರಲ್ಲಿನ ಅಧ್ಯಯನಶೀಲತೆಯಿಂದಾಗಿ ಬದುಕಿನಲ್ಲಿ ಯಶ ಕಂಡವರು. ರಾಜಕೀಯ ವ್ಯವಸ್ಥೆಗಳು ಬದಲಾದರೂ ಕೊಡ್ಗಿಯವರ ವ್ಯಕ್ತಿತ್ವ ಬದಲಾಗಲಿಲ್ಲ. ಅವರೆಂದೂ ಭ್ರಷ್ಟಾಚಾರವನ್ನು ಒಪ್ಪಿಕೊಂಡವರಲ್ಲ. ತಾನು ಕೆಲಸ‌ ಮಾಡಿದ‌ ಕ್ಷೇತ್ರಗಳಲ್ಲೆಲ್ಲಾ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬಂದವರು ಎಂದರು.

ADVERTISEMENT

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ‌ ಅವರು, ಕೊಡ್ಗಿಯವರ ಜೀವನೋತ್ಸಾಹವನ್ನು ಬಹಳ ಹತ್ತಿರದಿಂದಲೇ ನೋಡಿ ದಿಗ್ಬ್ರಮೆಗೊಂಡವನು ನಾನು. ಕಾರಂತರ ನಂತರ ಈ ನಾಡಿನಲ್ಲಿ ಮತ್ತೊಬ್ಬ ಜೀವನೋತ್ಸಾಹದ ಚೇತೋಹಾರಿ ವ್ಯಕ್ತಿ ಇದ್ದಿದ್ದರೆ ಅದು ಎ.ಜಿ ಕೊಡ್ಗಿಯವರು. ಅವರ ವಿಚಾರಗಳು, ಬದ್ದತೆಗಳು, ಅವರೊಂದಿಗಿನ ಭಾವನಾತ್ಮಕ ಸಂಬಂಧಗಳು, ಕಲ್ಮಶವಿಲ್ಲದ‌ ಅವರ ಮನಸ್ಸು, ನೇರ-ನುಡಿಯ ಅವರ ದಿಟ್ಟತನ ಮತ್ತವರ ಗಟ್ಟಿತನ‌ ಇವೆಲ್ಲವೂ ನನ್ನಲ್ಲಿ ಅತ್ಯಂತ ಅಚ್ಚರಿ ಹಾಗೂ ಕುತೂಹಲ‌ ಮೂಡಿಸಿತ್ತು. ಕೊಡ್ಗಿಯವರ ಬದುಕಿನಲ್ಲಿ ಅಸ್ಪೃಶ್ಯತೆಯ ಕಲ್ಪನೆಗಳಿರಲಿಲ್ಲ. ಸಮಪಾಲು- ಸಮಬಾಳ್ವೆಗೆ ಅವರಲ್ಲಿರುವಂತಹ ಬದ್ದತೆಯನ್ನು ಬೇರ್ಯಾವ ವ್ಯಕ್ತಿಯಲ್ಲೂ ನಾನು ಕಂಡಿರಲಿಲ್ಲ. ಅವರಿಂದಾಗಿ ನಾಲ್ಕು ಭಾರಿ ಶಾಸಕನಾಗಲು ಹಾಗೂ ಮೂರು ಬಾರಿ ಸಚಿವನಾಗಲು, ಒಮ್ಮೆ ವಿರೋಧಪಕ್ಷದ ನಾಯಕನಾಗಲು ಅವಕಾಶ ಸಿಕ್ಕಿತು. ವೈಯಕ್ತಿಕ ದ್ವೇಶದಿಂದ ರಾಜಕಾರಣದಲ್ಲಿ ಏನನ್ನು ಸಾಧ್ಯವಿಲ್ಲ ಸತ್ಯವನ್ನು ತಿಳಿಸಿದ ಆದರ್ಶ ವ್ಯಕ್ತಿ ಇನ್ನಿಲ್ಲ ಎನ್ನುವುದು ನಮಗೆಲ್ಲಾ ಅತ್ಯಂತ ನೋವಿನ‌ ಸಂಗತಿ ಎಂದು ಕಂಬನಿ ಮಿಡಿದರು.

ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ, ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ ಭಟ್ ನುಡಿ-ನಮನ ಅರ್ಪಿಸಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಶಾಸಕ‌ರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ವೇದವ್ಯಾಸ ಕಾಮತ್, ಜಿಲ್ಲಾ‌ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ಎ.ರಾಮಕೃಷ್ಣ ಕೊಡ್ಗಿ, ಎ.ಅನಂತಕೃಷ್ಣ ಕೊಡ್ಗಿ, ಡಾ.ರಾಧಾಕೃಷ್ಣ ಕೊಡ್ಗಿ, ಆಶೊಕಕುಮಾರ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರಕುಮಾರ ಕೊಡ್ಗಿ, ಆನಂದಕುಮಾರ ಕೊಡ್ಗಿ, ಕೃಷ್ಣಕುಮಾರ ಕೊಡ್ಗಿ, ರಾಜ್ಯ ಅಹಾರ ನಿಗಮದ ಅಧ್ಯಕ್ಷ ಕಿರಣಕುಮಾರ ಕೊಡ್ಗಿ, ಹಾಗೂ ಕೊಡ್ಗಿಯವರ ಪುತ್ರಿ ಶಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.