ADVERTISEMENT

ಕೇಂದ್ರ ಸಚಿವೆ ಶೋಭಾ ಜೊತೆಗಿನ ಸೆಲ್ಫಿ ಕಳಿಸಿ, ₹ 5 ಸಾವಿರ ಗೆಲ್ಲಿ: ಮಿಥುನ್ ರೈ

ಉಡುಪಿ, ಮಲ್ಪೆ ರಸ್ತೆ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನಾ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 15:00 IST
Last Updated 27 ಸೆಪ್ಟೆಂಬರ್ 2022, 15:00 IST
ಮಂಗಳವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮಲ್ಪೆ ಉಡುಪಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ದುರಸ್ತಿಗೆ ಒತ್ತಾಯಿಸಿ ಕಲ್ಮಾಡಿ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿದರು.
ಮಂಗಳವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮಲ್ಪೆ ಉಡುಪಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ದುರಸ್ತಿಗೆ ಒತ್ತಾಯಿಸಿ ಕಲ್ಮಾಡಿ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿದರು.   

ಉಡುಪಿ: ಸಂಸದೆ ಹಾಗೂ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರೊಂದಿಗೆ ಸೆಲ್ಫಿ ಕಳಿಸಿದ ಜಿಲ್ಲೆಯ ಆಯ್ದ ಐವರು ವಿಜೇತರಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಘೋಷಣೆ ಮಾಡಿದರು.

ಮಂಗಳವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಮಲ್ಪೆ ಉಡುಪಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ದುರಸ್ತಿಗೆ ಒತ್ತಾಯಿಸಿ ಕಲ್ಮಾಡಿ ಜಂಕ್ಷನ್‌ನಿಂದ ಕರಾವಳಿ ಬೈಪಾಸ್‌ವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

ಅ.7ರಿಂದ 14ರವರೆಗೆ ಉಡುಪಿ, ಕಾಪು, ಕುಂದಾಪುರ ತಾಲ್ಲೂಕುಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕಾಣಿಸಿಕೊಂಡರೆ ಸಾರ್ವಜನಿಕರು ತಕ್ಷಣ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮೊಬೈಲ್‌ಗೆ ಕಳಿಸಿದರೆ ಬಹುಮಾನ ಪಡೆಯಬಹುದು ಎಂದು ವ್ಯಂಗ್ಯವಾಡಿದರು.

ADVERTISEMENT

ಅ.14ರ ಬಳಿಕವೂ ಉಡುಪಿ ಜಿಲ್ಲೆಯಲ್ಲಿ ಶೋಭಾ ಕರಂದ್ಲಾಜೆ ಕಾಣಿಸಿಕೊಳ್ಳದಿದ್ದರೆ ಕಾಂಗ್ರೆಸ್‌ನಿಂದ ‘ಶೋಭಾ ನಾಪತ್ತೆ’ ದೂರು ದಾಖಲಿಸಲಾಗುವುದು ಎಂದರು.

ಬಿಜೆಪಿಗಿಂತ ಶೋಭಾ ಅವರ ಮೇಲೆ ಕಾಂಗ್ರೆಸ್‌ಗೆ ಹೆಚ್ಚಿನ ಗೌರವ ಇದೆ. ಸಂಸದರು ಕ್ಷೇತ್ರಕ್ಕೆ ಬಾರದಿದ್ದರೆ ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ದೂರು ದಾಖಲಿಸುತ್ತೇವೆ. ಜತೆಗೆ, ಕರಾವಳಿ ಮೇಲ್ಸೇತುವೆ ಮೇಲೆ ‘ಸಂಸದರನ್ನು ಹುಡುಕಿ ಕೊಡಿ’ ಎಂಬ ಪೋಸ್ಟರ್ ಅಂಟಿಸುತ್ತೇವೆ ಎಂದರು.

ಬಿಜೆಪಿ ಸರ್ಕಾರ ಮಂಪರಿನಲ್ಲಿದೆ. ಶಾಸಕ ರಘುಪತಿ ಭಟ್ ಹಣ ಎಣಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಗುತ್ತಿಗೆದಾರರಿಂದ ಕಮಿಷನ್ ಬಂದಿಲ್ಲ ಎಂಬ ಕಾರಣಕ್ಕೆ ರಸ್ತೆ ದುರಸ್ತಿ ವಿಳಂಬವಾಗಿರಬಹುದು ಎಂದು ಮಿಥುನ್ ರೈ ಟೀಕಿಸಿದರು.

ಮುಖಂಡ ಅಮೃತ್ ಶೆಣೈ ಮಾತನಾಡಿ, ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುವ ಮಲ್ಪೆ ಹೆದ್ದಾರಿ ದುಸ್ಥಿತಿ ಶೋಚನೀಯವಾಗಿದೆ. ಸಾರ್ವಜನಿಕರು ಹೆದ್ದಾರಿ ದುಸ್ಥಿತಿ ವಿರುದ್ಧ ಧನಿ ಎತ್ತಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕೆಪಿಸಿಸಿ ಪ್ಯಾನಲಿಸ್ಟ್‌ ವೆರೊನಿಕಾ ಕರ್ನೆಲಿಯೊ ಮಾತನಾಡಿ, 6 ತಿಂಗಳಿನಿಂದ ಉಡುಪಿ ರಸ್ತೆ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಬದಲಾಗಿ ಪ್ರಶ್ನಿಸಿದವರ ಮೇಲೆ ಮುಗಿಬೀಳಲಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ಬಿ.ನರಸಿಂಹ ಮೂರ್ತಿ, ಅಣ್ಣಯ್ಯ ಶೇರಿಗಾರ್, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ,ಆನಂದಿ, ಗಣೇಶ್ ನೆರ್ಗಿ, ಡಾ. ಸುನೀತಾ ಶೆಟ್ಟಿ,ಕುಶಲ ಶೆಟ್ಟಿ, ಸುರಯ್ಯ ಅಂಜಮ್, ಸುಂದರ್ ಮಾಸ್ತರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.