ADVERTISEMENT

ಪಡುಕೆರೆಯಲ್ಲಿ ಮರೀನಾ ನಿರ್ಮಾಣ: ಜಿಲ್ಲಾಧಿಕಾರಿ

ಯೋಜನೆಯ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 11:07 IST
Last Updated 18 ಡಿಸೆಂಬರ್ 2019, 11:07 IST
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರೀನಾ ಯೋಜನೆ ಅನುಷ್ಠಾನ ಸಭೆ ನಡೆಯಿತು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರೀನಾ ಯೋಜನೆ ಅನುಷ್ಠಾನ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯ ಪಡುಕೆರೆ ಬೀಚ್ ಪ್ರದೇಶವು ನೌಕೆಗಳು ತಂಗಲು ಸೂಕ್ತ ಜಾಗವಾಗಿದ್ದು, ಈ ಭಾಗದಲ್ಲಿ ಮರೀನಾ ನಿರ್ಮಾಣವಾದರೆ ದೇಶದ ಪ್ರಪ್ರಥಮ ಸುಸಜ್ಜಿತ ಮರೀನಾ ಹೊಂದಿದ ಹೆಗ್ಗಳಿಕೆ ಉಡುಪಿ ಜಿಲ್ಲೆಯದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮರೀನಾ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಕೊಚ್ಚಿಯಲ್ಲಿಮಾತ್ರ ಮರೀನಾ ಸೌಲಭ್ಯವಿದೆ. ಆದರೆ, ಇಲ್ಲಿ ಅಂತರರಾಷ್ಟ್ರೀಯ ಬೋಟ್ ಹಾಗೂ ವಿಹಾರ ನೌಕೆಗಳು ತಂಗಲು ಸೂಕ್ತ ಸೌಲಭ್ಯಗಳಿಲ್ಲ. ಪಡುಕೆರೆ ಬೀಚ್‌ ವ್ಯಾಪ್ತಿಯ 3 ಕಿ.ಮೀ ಹಿನ್ನೀರಿನಲ್ಲಿ ನೈಸರ್ಗಿಕ ದ್ವೀಪಗಳಿವೆ. ಈ ಪ್ರದೇಶದಲ್ಲಿ ವಿದೇಶಿ ನೌಕೆಗಳು ತಂಗುವಂತಹ ಮರೀನಾ ನಿರ್ಮಿಸಬಹುದು ಎಂದರು.

ADVERTISEMENT

ಮರೀನಾ ನಿರ್ಮಾಣದಿಂದ ಅಂತರರಾಷ್ಟ್ರೀಯ ನೌಕಾ ವಿಹಾರಿಗಳನ್ನು ಆಕರ್ಷಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಯ ಜತೆಗೆ, ಆರ್ಥಿಕತೆಗೆ ಶಕ್ತಿ ತುಂಬಬಹುದು. ಈ ನಿಟ್ಟಿನಲ್ಲಿ ಯೋಜನೆಯ ನೀಲ ನಕ್ಷೆ ತಯಾರಿಸಿ, ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ದೇಶದಲ್ಲಿ ನೌಕೆಗಳು ತಂಗಬಹುದಾದ ತೀರಗಳ ಕೊರತೆ ಇರುವುದರಿಂದ ಬೇರೆ ದೇಶಗಳ ನೌಕೆಗಳು ಅರಬ್ಬಿ ಸಮುದ್ರ ಮಾರ್ಗವಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿಯೇ ಲಂಗರು ಹಾಕುತ್ತವೆ. ಒಂದು ವರ್ಷದಲ್ಲಿ 4,000ದಷ್ಟು ನೌಕೆಗಳು ಈ ಮಾರ್ಗದಲ್ಲಿ ಸಾಗುತ್ತವೆ.

ಪಡುಕೆರೆ ತೀರ ಪ್ರದೇಶದಲ್ಲಿ ಮರೀನಾ ನಿರ್ಮಾಣವಾದರೆ, ಈ ಮಾರ್ಗದಲ್ಲಿ ಸಾಗುವ ನೌಕೆಗಳಿಗೆ ತಂಗುದಾಣ ಸಿಕ್ಕಂತಾಗುತ್ತದೆ. ಜತೆಗೆ, ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡರೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಹರಿದು ಬರಲಿದೆ. ಮಲ್ಪೆ-ಪಡುಕೆರೆ ಬೀಚ್ ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದರು.

ಮರೀನಾದಲ್ಲಿ ತೇಲುವ ಸೇತುವೆ, ಹೋಟೇಲ್, ರೆಸ್ಟೋರೆಂಟ್ ಹಾಗೂ ಮನೆಗಳನ್ನು ನಿರ್ಮಿಸುವ ಅವಕಾಶವಿದ್ದು, ಇದರಿಂದಲೂ ಹೆಚ್ಚಿನ ಆದಾಯಗಳಿಸಬಹುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸವಿವರವಾದ ಯೋಜನಾ ವರದಿಯನ್ನು ತಯಾರಿಸಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸೋಣ ಎಂದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಅಮಿತ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಒಳನಾಡು ಮತ್ತು ಜಲಸಾರಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ್ ಭಟ್, ಪ್ರವಾಸ ಮತ್ತು ಪ್ರಯಾಣ ಸಂಘದ ಅಧ್ಯಕ್ಷ ನಾಗರಾಜ್ ಹೆಬ್ಬಾರ್, ಎಸಿಟಿ ಕಾರ್ಯದರ್ಶಿ ಗೌರವ್ ಶೇಣವ್, ಕಾಪು ಬೀಚ್ ನಿರ್ವಹಣಾ ಸಮಿತಿಯ ಯತೀಶ್ ಬೈಕಂಪಾಡಿ, ಮಲ್ಪೆ ಬೀಚ್ ನಿರ್ವಹಣಾ ಸಮಿತಿಯ ಸುದೇಶ್ ರೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.