ADVERTISEMENT

ಉಡುಪಿ: ನಾಳೆಯಿಂದ ಕೊರೊನಾ ಕರ್ಫ್ಯೂ ಜಾರಿ

ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ವೈದ್ಯಕೀಯ ತುರ್ತು ಹೊರುತಪಡಿಸಿ ಎಲ್ಲ ಚಟುವಟಿಕೆಗಳು ನಿರ್ಬಂಧ: ಡಿಸಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 13:27 IST
Last Updated 9 ಏಪ್ರಿಲ್ 2021, 13:27 IST
ಜಿ.ಜಗದೀಶ್‌, ಜಿಲ್ಲಾಧಿಕಾರಿ
ಜಿ.ಜಗದೀಶ್‌, ಜಿಲ್ಲಾಧಿಕಾರಿ   

ಉಡುಪಿ: ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏ.10ರಿಂದ ಉಡುಪಿ ಹಾಗೂ ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಮಾಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ರಾಜ್ಯ ಸರ್ಕಾರದ ಆದೇಶದನ್ವಯ ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ಆರೋಗ್ಯ ತುರ್ತು ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ರಾತ್ರಿ ಪಾಳಿಯ ಉದ್ಯೋಗಕ್ಕೆ ತೆರಳುವವರು 10 ಗಂಟೆಯ ಒಳಗೆ ಕಾರ್ಖಾನೆಗೆ ತೆರಳಬೇಕು. ಬೆಳಿಗ್ಗೆ 5 ಗಂಟೆಯ ನಂತರ ಮನೆಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ವೈದ್ಯಕೀಯ ಸೇವೆ ಹೊರುತುಪಡಿಸಿ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಸಹ ಉಡುಪಿ ಹಾಗೂ ಮಣಿಪಾಲ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇ ಕಾಮರ್ಸ್ ಹಾಗೂ ಹೋಂ ಡೆಲಿವರಿ ಮಾಡುವವರಿಗೆ ಅನುಮತಿ ನೀಡಲಾಗಿದೆ. ಜತೆಗೆ, ರೈಲು ಹಾಗೂ ವಿಮಾನದ ಮೂಲಕ ದೂರ ಪ್ರಯಾಣ ಮಾಡುವವರು ಆಟೊ ಹಾಗೂ ಕ್ಯಾಬ್‌ಗಳಲ್ಲಿ ನಿಲ್ದಾಣಕ್ಕೆ ತೆರಳು ಅನುಮತಿ ನೀಡಲಾಗಿದೆ. ಆದರೆ, ಪ್ರಯಾಣದ ಟಿಕೆಟ್‌ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.

ADVERTISEMENT

ಕೊರೊನಾ ಕರ್ಫ್ಯೂ ಆದೇಶ ಏ.10ರಂದು ರಾತ್ರಿ 10ರಿಂದ ಏ.20ರ ರಾತ್ರಿ 10ರವರೆಗೆ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದರು.

ಕೊರೊನಾ ಕರ್ಫ್ಯೂ ಬೇಡ: ರಘುಪತಿ ಭಟ್‌

ಕರಾವಳಿಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಾತ್ರಿ ವೇಳೆ ದೈವ ಕೋಲ, ನಾಗಾರಾಧನೆ ಹಾಗೂ ಯಕ್ಷಗಾನ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ಕಳೆದ ವರ್ಷ ಲಾಕ್‌ಡೌನ್ ಕಾರಣದಿಂದ ಧಾರ್ಮಿಕ ಆಚರಣೆಗಳು ನಡೆಯಲಿಲ್ಲ. ಈಗ ಕರ್ಫ್ಯೂ ಜಾರಿಯಾದರೆ ಮತ್ತೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ದೈವದ ಕೋಲ ನಡೆಸಲು ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಲಾಗಿದೆ. ಉಡುಪಿಯಲ್ಲಿ ಸಧ್ಯ ಕೊರೊನಾ ಆಂತಕವಿಲ್ಲ. ಕಂಟೈನ್‌ಮೆಂಟ್ ಆಗಿದ್ದ ಎಂಐಟಿಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಜಿಲ್ಲೆಯಲ್ಲಿ 401 ಸಕ್ರಿಯ ಸೋಂಕಿತರು ಮಾತ್ರ ಇದ್ದಾರೆ. ಹಾಗಾಗಿ, ಉಡುಪಿ ಹಾಗೂ ಮಣಿಪಾಲ ನಗರಗಳಲ್ಲಿ ಕರ್ಫ್ಯೂ ಜಾರಿ ಬೇಡ ಎಂದು ರಘುಪತಿ ಭಟ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.