ADVERTISEMENT

ಶಾಲಾ ಕಾಲೇಜುಗಳಲ್ಲಿ ‘ಕೋವಿಡ್‌’ ಆತಂಕ

ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಎಚ್ಚರವಹಿಸದಿದ್ದರೆ ಆಪತ್ತು

ಬಾಲಚಂದ್ರ ಎಚ್.
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಆತಂಕ ಸೃಷ್ಟಿಸುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ವರ್ಷಾರಂಭದಲ್ಲಿ ಕ್ಷೀಣವಾಗಿದ್ದ ಸೋಂಕಿನ ಪ್ರಮಾಣ ಈಗ ಏರುಗತಿಯಲ್ಲಿ ಸಾಗುತ್ತಿದೆ.‌ ಮತ್ತೊಂದೆಡೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚು ಪತ್ತೆಯಾಗುತ್ತಿರುವುದು ಆತಂಕ ಸೃಷ್ಟಿಯಾಗಿದೆ.

ಕಾಲೇಜುಗಳು ಕೊರೊನಾ ಹಾಟ್‌ಸ್ಪಾಟ್‌

ಮಾರ್ಚ್‌ನಲ್ಲಿ ದೃಢಪಟ್ಟ 1,630 ಪ್ರಕರಣ ಪೈಕಿ 1,000ಕ್ಕೂ ಮಿಕ್ಕಿ ಸೋಂಕು ಪತ್ತೆಯಾಗಿರುವುದು ಮಣಿಪಾಲದ ಎಂಐಟಿಯಲ್ಲಿ. ಸಧ್ಯ ಎಂಐಟಿ ಕ್ಯಾಂಪಸ್‌ ಕಂಟೈನ್‌ಮೆಂಟ್ ವಲಯವಾಗಿದ್ದು, ಅಲ್ಲಿನ 5,000 ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 11,000 ಮಂದಿಗೆ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವಿಟಿ ದರ ಶೇ 15ರ ಆಸುಪಾಸಿನಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಮತ್ತೊಂದೆಡೆ ಕುಂಜಾರುಗಿರಿ ಶಾಲೆಯಲ್ಲೂ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು, ಕಂಟೈನ್‌ಮೆಂಟ್ ವಲಯವನ್ನಾಗಿ ಮಾಡಲಾಗಿದೆ. ಜತೆಗೆ ಶುಕ್ರವಾರ ಕುಂದಾಪುರದ ಕಾಲೇಜೊಂದರಲ್ಲಿ 22 ವಿದ್ಯಾರ್ಥಿಗಳಲ್ಲಿ, ಉಡುಪಿಯ ಕಾಲೇಜಿನಲ್ಲಿ 9 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ ಎಂಬ ಆತಂಕ ಮೂಡುತ್ತಿದೆ.

ಸಮುದಾಯದಲ್ಲಿ ಮತ್ತೆ ಸೋಂಕು

ಸಮುದಾಯದಲ್ಲೂ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕ ತಂದಿದೆ. ಮಾರ್ಚ್‌ 15ರ ನಂತರ ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಎಂಐಟಿಯ ಪಾಲು ಹೆಚ್ಚಾಗಿದ್ದರೂ, ಕಳೆದ ಮೂರ್ನಾಲ್ಕು ದಿನಗಳ ಅಂಕಿ ಅಂಶಗಳ ಪ್ರಕಾರ ಉಡುಪಿ ಹಾಗೂ ಕುಂದಾಪುರದಲ್ಲಿ ಸೋಂಕು ಹೆಚ್ಚುತ್ತಿರುವುದು ಕಂಡುಬರುತ್ತಿದೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಪ್ರಕಾರಮಾರ್ಚ್‌ 30ರಂದು ದೃಢಪಟ್ಟ 53 ಸೋಂಕಿತರಲ್ಲಿ 18 ಎಂಐಟಿಗೆ ಸೇರಿದ್ದರೆ, 16 ಕುಂದಾಪುರ, ಉಡುಪಿಯ 15 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 31ರಂದು 56 ಸೋಂಕಿತರಲ್ಲಿ ಎಂಐಟಿಯಲ್ಲಿ 17, ಉಡುಪಿಯಲ್ಲಿ 22, ಕುಂದಾಪುರದಲ್ಲಿ 8, ಕಾರ್ಕಳದಲ್ಲಿ 6 ಮಂದಿಯಲ್ಲಿ, ಏ.1ರಂದು ಪತ್ತೆಯಾದ 53 ಪ್ರಕರಣಗಳಲ್ಲಿ ಎಂಐಟಿಯ 11, ಉಡುಪಿಯ 12, ಕುಂದಾಪುರದ 26 ಹಾಗೂ ಏ.2ರಂದು ದೃಢಪಟ್ಟ 95 ಸೋಂಕಿತರಲ್ಲಿ ಎಂಐಟಿಯ 22, ಉಡುಪಿಯ 35 ಹಾಗೂ ಕುಂದಾಪುರದ 30, ಕಾರ್ಕಳದ 8 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಸೋಂಕು ಕಂಟೈನ್‌ಮೆಂಟ್ ವಲಯ ಹೊರತಾದ ಪ್ರದೇಶಗಳಲ್ಲೂ ಹೆಚ್ಚುತ್ತಿರುವುದು ಸ್ಪಷ್ವವಾಗುತ್ತದೆ.

ಸಾವಿನ ಸಂಖ್ಯೆಯೂ ಏರಿಕೆ

ಜಿಲ್ಲೆಯಲ್ಲಿ ತಗ್ಗಿದ್ದ ಕೋವಿಡ್ ಮರಣ ನಿಧಾನವಾಗಿ ಹೆಚ್ಚಾಗುತ್ತಿದ್ದು, ಮಾರ್ಚ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಾರ್ಚ್‌ 28 ರಂದು ಕೋವಿಡ್ ತಗುಲಿದ್ದ ಕಾರ್ಕಳದ 69 ವರ್ಷದ ವೃದ್ಧ ಹಾಗೂ 31ರಂದು ಉಡುಪಿಯ 90 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.