
ಉಡುಪಿ: ಸಿಪಿಎಂ ಚುನಾವಣೆಯಲ್ಲಿ ಸೋಲಬಹುದು ಆದರೆ ನಿರಂತರ ಜನರ ನಡುವೆ ಅಧಿಕಾರದಲ್ಲಿರುತ್ತದೆ. ಕಮ್ಯುನಿಸ್ಟ್ ಬಗ್ಗೆ ಕೆಲವು ಮಂದಿ ಪೂರ್ವಗ್ರಹಪೀಡಿತರಾಗಿದ್ದಾರೆ ಎಂದು ಪಕ್ಷದ ಸದಸ್ಯ ಅದಮಾರು ಶ್ರೀಪತಿ ಆಚಾರ್ಯ ಹೇಳಿದರು.
ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣ ಬಳಿಯ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಮಹಾಮಾಯ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ನೊಂದವರ, ಶೋಷಿತರ ಪರವಾಗಿ ನಿಲ್ಲುವುದೇ ಪಕ್ಷ ಸಿದ್ಧಾಂತವಾಗಿರುವುದರಿಂದ ಪಕ್ಷವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಸರ್ಕಾರದ ನೀತಿಗಳಿಂದ ಜಿಲ್ಲೆಯ ಅಪಾರ ಸಂಖ್ಯೆಯ ಜನರು ಇಂದು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಗೆ ಸಿಪಿಎಂ ಪಕ್ಷವೇ ಪರ್ಯಾಯ ಆಗಬೇಕಾಗಿದೆ ಎಂದರು.
ಜನರನ್ನು ಬೆಲೆ ಏರಿಕೆಯಿಂದ ರಕ್ಷಿಸಬೇಕಾದ ಹೊಣೆ ಪಕ್ಷದ ಮೇಲಿದೆ. ಕಾರ್ಮಿಕ ವರ್ಗದ ಪಕ್ಷವಾಗಿ ಕಾರ್ಮಿಕರ ಕಾನೂನು ರಕ್ಷಿಸಬೇಕು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಸದಸ್ಯ ಕೆ. ಶಂಕರ್ ಅವರು ಪಕ್ಷದ ನಾಮಫಲಕ ಅನಾವರಣಗೊಳಿಸಿದರು. ಸಿಪಿಐನ ಕಾರ್ಯದರ್ಶಿ ಶೇಖರ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ವಹಿಸಿದ್ದರು.
ಕಟ್ಟಡ ಮಾಲೀಕ ಲಕ್ಷ್ಮೀನಾರಾಯಣ ಭಟ್, ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್. ಕಾಂಚನ್, ಉಮೇಶ್ ಕುಂದರ್, ಶೀಲಾವತಿ ಪಡುಕೋಣೆ, ವಾಮನ ಪೂಜಾರಿ, ಶಿವಾನಂದ, ಕೋಣಿ ವೆಂಕಟೇಶ್, ಬಲ್ಕೀಸ್, ಸರೋಜ, ಸಂಜೀವ ಬಳ್ಕೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.