ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅಪರಾಧಿ ಹನುಮಂತನಿಗೆ (55) ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ಪೊಕ್ಸೋ ತ್ವರಿತ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ಜೈಲು ಶಿಕ್ಷೆಯ ಜತೆಗೆ ₹ 25,000 ಹಾಗೂ 20,000 ದಂಡ ಹಾಗೂ ದಂಡ ತೆರಲು ವಿಫಲವಾದರೆ ಹೆಚ್ಚುವರಿ ಒಂದು ವರ್ಷ ಸಾದಾ ಶಿಕ್ಷೆ ವಿಧಿಸಲಾಗಿದೆ. ದಂಡದಲ್ಲಿ ₹ 40,000 ಸಂತ್ರಸ್ತೆಗೆ ನೀಡಲು ಆದೇಶಿಸಿರುವ ನ್ಯಾಯಾಲಯ ₹ 5000ವನ್ನು ಸರ್ಕಾರಕ್ಕೆ ಭರಿಸಲು ತಿಳಿಸಿದೆ. ಜತೆಗೆ ಸಂತ್ರಸ್ತ ಬಾಲಕಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.
ಘಟನೆ ವಿವರ:
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ ತಾಯಿಯ ಜತೆ ತೋಟದ ಮನೆಯಲ್ಲಿದ್ದಳು. ಅಲ್ಲಿಯೇ ಆರೋಪಿಯೂ ಕೆಲಸ ಮಾಡಿಕೊಂಡಿದ್ದ. 2021ರ ಜನವರಿಯಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಅತ್ಯಾಚಾರ ಎಸಗಿದ್ದ. ಬಾಲಕಿಯನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕಿಯ ತಾಯಿ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಿ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. 18 ಸಾಕ್ಷಿಗಳ ಪೈಕಿ 12 ಮಂದಿ ವಿಚಾರಣೆಗೆ ಹಾಜರಾಗಿದ್ದರು. ವೈದ್ಯಕೀಯ ಸಾಕ್ಷಿ ಮತ್ತು ಬಾಲಕಿಯ ಸಾಕ್ಷ್ಯ ಅಭಿಯೋಜನೆಗೆ ಪರವಾಗಿದ್ದರಿಂದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.