ADVERTISEMENT

ಪಡುಬಿದ್ರಿ | ಮಳೆಗೆ ಬೆಳೆ ನಾಶ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:40 IST
Last Updated 18 ಅಕ್ಟೋಬರ್ 2025, 5:40 IST
ಮಳೆಯಿಂದಾಗಿ ಹೆಜಮಾಡಿ ಗ್ರಾಮದ ಶಿವನಗರ ಪ್ರದೇಶದಲ್ಲಿ ಬೆಳೆ ನಾಶವಾಗಿರುವುದು 
ಮಳೆಯಿಂದಾಗಿ ಹೆಜಮಾಡಿ ಗ್ರಾಮದ ಶಿವನಗರ ಪ್ರದೇಶದಲ್ಲಿ ಬೆಳೆ ನಾಶವಾಗಿರುವುದು    

ಪಡುಬಿದ್ರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಕಿಂಡಿ ಅಣೆಕಟ್ಟು ಮುಚ್ಚಿರುವ ಪರಿಣಾಮ ಹೆಜಮಾಡಿ ಗ್ರಾಮದ ಶಿವನಗರ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಜಯಲಕ್ಷ್ಮೀ ಶೆಟ್ಟಿ ಅವರ ಎರಡೂವರೆ ಎಕರೆ ಜಮೀನಿನಲ್ಲಿ ಸುದೀಶ್ ಶೆಟ್ಟಿ ಅವರು 3 ತಿಂಗಳ ಹಿಂದೆ ಭತ್ತ  ಬೆಳೆದಿದ್ದರು. ಕಟಾವಿಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗ ನಿರಂತರ ಮಳೆಯಿಂದ ಗದ್ದೆಯಲ್ಲಿ ನೀರು ಹರಿಯುತ್ತಿದೆ. ಇಲ್ಲಿ ಪಕ್ಕದಲ್ಲಿ ಇರುವ ಕಿಂಡಿ ಅಣೆಕಟ್ಟುವಿಗೆ ಹಲಗೆ ಇಟ್ಟು ಮುಚ್ಚಿರುವುದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದ್ದು, ಬೆಳೆ ಸಂಪೂರ್ಣ ಹಾನಿಗೊಳಗಾಗಿದೆ ಎನ್ನುತ್ತಾರೆ ಈ ಭಾಗದ ಕೃಷಿಕರು.

‘ನನಗೆ 82 ವರ್ಷ ವಯಸ್ಸು. ಹಿಂದೆ ನಾವೇ ನಾಟಿ ಮಾಡುತ್ತಿದ್ದೆವು. ಈಗ ಸಾಧ್ಯವಾಗದ ಕಾರಣ ಸುದೀಶ್ ಶೆಟ್ಟಿ ಅವರಿಗೆ ಗದ್ದೆ ನೀಡಿದ್ದೆ. ಕಿಂಡಿ ಅಣೆಕಟ್ಟು ಮುಚ್ಚಿರುವುದರಿಂದ ನೀರು ನಿಂತು ಬೆಳೆ ನಾಶವಾಗಿದೆ. ಪಂಚಾಯಿತಿಗೆ ವಿಷಯ ತಿಳಿಸಿದ್ದೇವೆ. ಮನೆಯ ಸುತ್ತಮುತ್ತಲೂ ನೀರು ತುಂಬಿಕೊಂಡಿದೆ’ ಎಂದು ಜಯಲಕ್ಷ್ಮೀ ಶೆಟ್ಟಿ ಕಣ್ಣೀರಿಟ್ಟರು.

ADVERTISEMENT

‘ಮೂರು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಏಳು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿದ್ದೆ. ಕಟಾವಿನ ಸನ್ನಿಹಿತ ಸಮಯದಲ್ಲಿ ಮಳೆ ಬಂದು ಹಾನಿಯಾಗಿದೆ. ಕಿಂಡಿ ಅಣೆಕಟ್ಟು ತೆರೆಯದ ಕಾರಣ ನೀರು ಹೊರಹೋಗದಿರುವುದು ಪ್ರಮುಖ ಸಮಸ್ಯೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಸ್ಪಂದನೆ ದೊರೆತಿಲ್ಲ. ಶೀಘ್ರ ಈ ಬಗ್ಗೆ ಕ್ರಮ ಕೈಗೊಂಡು ಕಿಂಡಿ ಅಣೆಕಟ್ಟು ತೆರವುಗೊಳಿಸಬೇಕು’ ಎಂದು ಸುದೀಶ್ ಶೆಟ್ಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.