ADVERTISEMENT

ಉಡುಪಿ: ‘ಭಯಬಿಟ್ಟರೆ ಕೊರೊನಾ ಬಿಟ್ಟು ಓಡುತ್ತದೆ’

ಮಾನಸಿಕ ಸದೃಢತೆಯೇ ಕೊರೊನಾಗೆ ಮದ್ದು

ಬಾಲಚಂದ್ರ ಎಚ್.
Published 16 ಜುಲೈ 2020, 15:23 IST
Last Updated 16 ಜುಲೈ 2020, 15:23 IST
ವೆಂಕಟೇಶ್ ಪ್ರಭು
ವೆಂಕಟೇಶ್ ಪ್ರಭು   

ಉಡುಪಿ: ‘ಕೊರೊನಾ ಬಂತು ಅಂಥ ಯಾರೂ ಹೆದರುವ ಅವಶ್ಯಕತೆ ಇಲ್ಲ. ಜೀವನದ ಜಂಜಾಟಗಳಿಗೆ ಅಲ್ಪ ವಿರಾಮ ಸಿಕ್ಕಿದೆ ಅಂತಾ ತಿಳಿದು ಒಂದು ವಾರ ಆಸ್ಪತ್ರೆಯಲ್ಲಿ ಒಂಟಿಯಾಗಿದ್ದುಕೊಂಡು ಜೀವನದ ಪ್ರತಿಕ್ಷಣವನ್ನು ಆನಂದದಿಂದ ಕಳೆಯಿರಿ’.

ಹೀಗೆ, ಜೀವನೋತ್ಸಾಹದ ಮಾತುಗಳನ್ನಾಡಿದವರು ಕೋವಿಡ್‌ನಿಂದ ಗುಣಮುಖರಾದ ಕೋಟದ ಹೋಟೆಲ್‌ ಉದ್ಯಮಿ ವೆಂಕಟೇಶ್‌ ಪ್ರಭು.

‘ಕೊರೊನಾ ಬಂದಾಕ್ಷಣ ಜೀವನವೇ ಮುಗಿಯಿತು ಅಂದುಕೊಳ್ಳಬೇಡಿ. ಕೊರೊನಾ ಜೀವ ತೆಗೆಯುವಂತಹ ಮಾರಣಾಂತಿಕ ರೋಗವಲ್ಲ; ಸೋಂಕು ಅಷ್ಟೆ. ಕೊರೊನಾಗೆ ಧೈರ್ಯವೇ ಮದ್ದು. ಮಾನಸಿಕವಾಗಿ ಸದೃಢವಾಗಿದ್ದರೆ ಸೋಂಕು ವಾಸಿಯಾಗುತ್ತದೆ’ ಎಂದು ತಮ್ಮ ಅನುಭವ ಹಂಚಿಕೊಂಡರು ವೆಂಕಟೇಶ್ ಪ್ರಭು.

ADVERTISEMENT

‘ಜುಲೈ 1ರಂದು ಮಗ ನನ್ನ ಬಳಿಬಂದು, ಅಪ್ಪ ಧೈರ್ಯತಂದುಕೊಳ್ಳಿ, ನಿಮಗೆ ಕೊರೊನಾ ಸೋಂಕು ತಗುಲಿದೆ ಎಂದಾಗ ಕುಸಿದುಹೋಗಿದ್ದೆ. ಮಾಧ್ಯಮಗಳಲ್ಲಿ ತೋರಿಸಿದ್ದ ಸೋಂಕಿತರ ನರಳಾಟವೆಲ್ಲ ಒಂದು ಕ್ಷಣ ಕಣ್ಮುಂದೆ ಬಂತು. ರಕ್ತದೊತ್ತಡ ಹೆಚ್ಚಾಯ್ತು. ಆತಂಕದಲ್ಲಿಯೇ ಆಂಬುಲೆನ್ಸ್ ಹತ್ತಿ ಆಸ್ಪತ್ರೆ ಸೇರಿದೆ. 2 ದಿನ ಭಯದಲ್ಲೇ ಕಾಲ ಕಳೆದೆ’.

‘ಬಳಿಕ ಆಪ್ತರು, ಸ್ನೇಹಿತರು, ಸಂಬಂಧಿಗಳ ಮಾತುಗಳಿಂದ ಜೀವನೋತ್ಸಾಹ ಚಿಗುರಿತು. ಮಾನಸಿಕವಾಗಿ ಸದೃಢವಾಗಿರುವುದೇ ಕೊರೊನಾಗೆ ಮದ್ದು ಎಂಬ ಸತ್ಯದ ಅರಿವಾಯಿತು. ಅಂದಿನಿಂದ ಪ್ರತಿಕ್ಷಣವನ್ನು ಆನಂದಿಸುತ್ತಾ ಹೋದೆ’ ಎಂದರು ವೆಂಕಟೇಶ್ ಪ್ರಭು.

‘ಮೊದಲ ದಿನ ರಕ್ತಪರೀಕ್ಷೆ, ಇಸಿಜಿ, ಎಕ್ಸ್‌ರೇ ಮಾಡಿ ಒಂದು ಕೊಠಡಿಯಲ್ಲಿ ಬಿಟ್ಟರು. ರೋಗದ ಗುಣಲಕ್ಷಣಗಳು ಇಲ್ಲವಾದ್ದರಿಂದ ಔಧದವನ್ನೂ ಕೊಡಲಿಲ್ಲ. ವೈದ್ಯರು ಆಗಾಗ ಫೋನ್‌ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ರುಚಿಯಾದ ಊಟ ಬರುತ್ತಿತ್ತು. ಒಂಟಿಯಾಗಿ ಇರಬೇಕು ಎಂಬುದನ್ನು ಬಿಟ್ಟರೆ ಅಲ್ಲಿ ಯಾವ ಕೊರತೆಯೂ ಇರಲಿಲ್ಲ’ ಎಂದರು.

‘ಏಕಾಂಗಿತನ ಕಳೆಯಲು ಇಷ್ಟದ ಹಾಡುಗಳನ್ನು ಹಾಡಿದೆ, ಡ್ಯಾನ್ಸ್‌ ಮಾಡಿ ಸಂಭ್ರಮಿಸಿದೆ. ಪತ್ನಿಗೆ ವಿಡಿಯೋ ಕರೆ ಮಾಡಿ ನೃತ್ಯ ಮಾಡಿದ ವಿಡಿಯೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡೆ. ಒಂದು ಲಕ್ಷಕ್ಕೂ ಹೆಚ್ಚು ಜನರು ವಿಡಿಯೋ ವೀಕ್ಷಿಸಿ ಖುಷಿಪಟ್ಟರು. ಹಲವು ಸೋಂಕಿತರು ಕರೆ ಮಾಡಿ ವಿಡಿಯೋ ನೋಡಿ ಮನಸ್ಸಿನಲ್ಲಿದ್ದ ಭಯ ದೂರವಾಗಿ ನೆಮ್ಮದಿಯಿಂದ ಇದ್ದೇವೆ ಎಂದಾಗ ಸಾರ್ಥಕ ಭಾವ ಮೂಡಿತು’ ಎಂದರು ವೆಂಕಟೇಶ್ ಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.