ಕೊಡಿಯಾಲ್ ಗುತ್ತು ಸಮೀಪ ರಾತ್ರಿ ಸುರಿದ ಮಳೆಯಿಂದ ರಸ್ತೆ ಬದಿ ನಿಲ್ಲಿಸಿದ್ದ ವಾಹನ ನೀರಿನಲ್ಲಿ ಮುಳುಗಿರುವುದು
ಮಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ನೀರೆಯಲ್ಲಿ 26.1 ಸೆಂ.ಮೀ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ 23.4 ಸೆಂ.ಮೀ, ಕಾಪು ತೆಂಕದಲ್ಲಿ 22 ಸೆಂ.ಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಾಳದಲ್ಲಿ 22 ಸೆಂ.ಮೀ, ಮೂಲ್ಕಿ ಐಕಳದಲ್ಲಿ 21 ಸೆಂ.ಮೀ, ಕಿಲ್ಪಾಡಿ ಮತ್ತು ಕಿನ್ನಿಗೋಳಿಯಲ್ಲಿ 19 ಸೆಂ.ಮೀ, ಸುರತ್ಕಲ್ 18 ಸೆಂ.ಮೀ ಮಳೆ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ.
ಧಾರಾಕಾರ ಮಳೆಯಾಗುತ್ತಿದ್ದು, ಕಾರ್ಮೋಡ ಆವರಿಸಿದೆ. ಬೆಳಿಗ್ಗೆ 8 ಗಂಟೆ ಕಳೆದರೂ ಬೆಳಕು ಹರಿದಿಲ್ಲ. ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದಾರೆ.
ನಗರದ ಕೊಡಿಯಾಲ್ ಗುತ್ತು, ಕೊಟ್ಟಾರ ಚೌಕಿ ಮತ್ತಿತರ ಭಾಗಗಳಲ್ಲಿ ರಸ್ತೆಯೇ ಹೊಳೆಯಂತಾಗಿದೆ. ರಸ್ತೆಯ ಮೇಲೆ ನಿಲ್ಲಿಸಿರುವ ವಾಹನಗಳು ನೀರಿನಲ್ಲಿ ಮುಳುಗಿವೆ.
ಭಾರತ ಹವಾಮಾನ ಇಲಾಖೆ ಯಲ್ಲೊ ಅಲರ್ಟ್ ನೀಡಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.