
ಉಡುಪಿ: ‘ಸಮವಸ್ತ್ರ ಧರಿಸಿ ಬೀದಿಬೀದಿಗಳಲ್ಲಿ ಪಥ ಸಂಚಲನ ನಡೆಸಿದರೆ ದೇಶದಲ್ಲಿ ಸಮಾನತೆ ಮೂಡಿಸಲು ಸಾಧ್ಯವಿಲ್ಲ’ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.
ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಕ್ಯಾಂಡಲ್ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
‘ಆರ್‌ಎಸ್‍ಎಸ್ ಶಿಸ್ತಿನ ಹೆಸರಿನಲ್ಲಿ ಜೀವ ವಿರೋಧಿ ಕೆಲಸ ಮಾಡುತ್ತಾ ದಲಿತರನ್ನು ಮತ್ತು ಹಿಂದುಳಿದವರನ್ನು ಬ್ರೈನ್‌ವಾಶ್ ಮಾಡಲು ಬೈಠಕ್‍ಗಳನ್ನು ನಡೆಸುತ್ತಿದೆ. ಶಿಸ್ತಿನ ಹೆಸರಿನಲ್ಲಿ ಯಾರೋ ಹಾಕಿದ ಗೆರೆಯನ್ನು ದಾಟದೆ ಹೋಗುವ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಜೈಲಿಗೆ ತಳ್ಳಲಾಗುತ್ತಿದೆ’ ಎಂದರು.
ಕಾರಂತ ಟ್ರಸ್ಟ್ ಅಧ್ಯಕ್ಷ ಗಣನಾಥ ಎಕ್ಕಾರು ಮಾತನಾಡಿ, ‘ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕ್ಷಣವನ್ನು ಇಂದು ವ್ಯಾಪಾರೀಕರಣ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು’ ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿದರು. ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಮಹಾಬಲ ಕುಂದರ್, ಸತೀಶ್ ನಾಯ್ಕ, ರಮೇಶ್ ತಿಂಗಳಾಯ, ವೆಂಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ, ಮಾಧವ ಬನ್ನಂಜೆ, ಸತೀಶ್ ಕೊಡವೂರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.