
ಉಡುಪಿ: ವಿದ್ಯುತ್ ಸಂಪರ್ಕವಿಲ್ಲದ ತಗಡಿನ ಶೆಡ್ನಲ್ಲಿ ವಾಸವಾಗಿದ್ದ ವಿದ್ಯಾರ್ಥಿಯ ಮನೆಗೆ ಸೋಲಾರ್ ದೀಪದ ವ್ಯವಸ್ಥೆ ಮಾಡುವ ಮೂಲಕ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಸಿ.ಜಾಹ್ನವಿ ಮಾದರಿಯಾಗಿದ್ದಾರೆ.
ಬುಧವಾರ ಡಿಡಿಪಿಐ ಎನ್.ಎಚ್.ನಾಗೂರ ಅವರ ನೇತೃತ್ವದ ಅಧಿಕಾರಿಗಳ ತಂಡ ಪಂದುಬೆಟ್ಟುವಿನ ವಿದ್ಯಾರ್ಥಿಯ ಮನೆಗೆ ತೆರಳಿ ಬಾಲಕನ ಪೋಷಕರಿಗೆ ಸೋಲಾರ್ ದೀಪ ಹಸ್ತಾಂತರಿಸಿತು.
‘ಮಂಗಳವಾರ ಪಾಲಕರ ಮನೆಭೇಟಿ ಕಾರ್ಯಕ್ರಮದ ಭಾಗವಾಗಿ ಪಂದುಬೆಟ್ಟುವಿನಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಲ್ಲೇಶನ ಮನೆಗೆ ಭೇಟಿನೀಡಿದಾಗ, ಬಾಲಕನ ಪರಿಸ್ಥಿತಿ ಅರಿವಿಗೆ ಬಂತು. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಚಿಮ್ಮಲಗಿ ಗ್ರಾಮದ ಮಲ್ಲೇಶ ತಾಯಿಯೊಂದಿಗೆ ಕನಿಷ್ಠ ಮೂಲಸೌಲಭ್ಯಗಳಿಲ್ಲದ ತಗಡಿನ ಶೆಡ್ನಲ್ಲಿ ವಾಸವಿರುವುದು ಗಮನಕ್ಕೆ ಬಂತು.
ಓದಲು ಅಗತ್ಯವಾಗಿ ಬೇಕಿದ್ದ ವಿದ್ಯುತ್ ದೀಪದ ವ್ಯವಸ್ಥೆಯೂ ಇರಲಿಲ್ಲ. ಇದನ್ನು ಕಂಡು ಬಾಲಕನ ನೆರವಿಗೆ ಸಹಾಯ ಕೋರಿ ಶಿಕ್ಷಣಾಧಿಕಾರಿಗಳ ಗುಂಪಿಗೆ ಸಂದೇಶ ಹಾಕಲಾಗಿತ್ತು. ತಕ್ಷಣ ಕರೆ ಮಾಡಿದ ಶಿಕ್ಷಣಾಧಿಕಾರಿ ಸಿ.ಜಾಹ್ನವಿ ಸೋಲಾರ್ ಲ್ಯಾಂಪ್ ನೀಡುವುದಾಗಿ ಭರವಸೆ ನೀಡಿದರು. ಬುಧವಾರ ಮಲ್ಲೇಶನ ಮನೆಗೆ ತೆರಳಿ ಸೋಲಾರ್ ದೀಪ ಹಸ್ತಾಂತರ ಮಾಡಲಾಯಿತು’ ಎಂದು ಡಿಡಿಪಿಐ ಎನ್.ಎಚ್.ನಾಗೂರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಲ್ಲೇಶನ ತಾಯಿ ಶೋಭಾ, ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ ಭಟ್, ದೈಹಿಕ ಶಿಕ್ಷಕಿ ಸೌಮ್ಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.